ಮುಂಬೈ, ಡಿ.18(DaijiworldNews/AA): ಲಾಪತಾ ಲೇಡೀಸ್ ಸಿನಿಮಾ ಆಸ್ಕರ್ ರೇಸ್ನಿಂದ ಹೊರ ಬಿದ್ದಿದ್ದು, ಈ ಮೂಲಕ 2025ರಲ್ಲಿ ಆಸ್ಕರ್ ಗೆಲ್ಲಬೇಕು ಎಂಬ ಭಾರತೀಯರ ಕನಸು ಕನಸಾಗೇ ಉಳಿದಿದೆ. ಈ ಬಗ್ಗೆ 'ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್' ಘೋಷಿಸಿದೆ.
ಈ ವರ್ಷ ಭಾರತದಲ್ಲಿ ಸಿನಿ ಪ್ರೀಯರು ಅತಿ ಹೆಚ್ಚು ಇಷ್ಟ ಪಟ್ಟ ಸಿನಿಮಾಗಳಲ್ಲಿ 'ಲಾಪತಾ ಲೇಡೀಸ್' ಸಿನಿಮಾ ಕೂಡ ಒಂದು. ಈ ಸಿನಿಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್ಗೆ ನಾಮಿನೇಟ್ ಆಯಿತು. 'ವಿದೇಶಿ ಸಿನಿಮಾ' ವಿಭಾಗಕ್ಕೆ ಈ ಚಿತ್ರ ಕಳುಹಿಸಲಾಗಿತ್ತು. ಈ ಬಗ್ಗೆ ಇಂದು ಘೋಷಣೆಯಾಗಿದ್ದು, ಸಿನಿಮಾ ಟಾಪ್ 15ರ ಪಟ್ಟಿಗೆ ಬರಲು ಅನರ್ಹವಾಗಿದೆ.
ಮಾರ್ಚ್ 2ರಂದು ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದಲ್ಲಿ ನಡೆಯಲಿದೆ. 'ಆಸ್ಕರ್ ಅವಾರ್ಡ್' ನಾಮಿನೇಷನ್ ಜನವರಿ 17ರಂದು ಘೋಷಣೆಯಾಗಲಿದೆ. ಮಾರ್ಚ್ 2ರಂದು ಅದ್ದೂರಿ ಕಾರ್ಯಕ್ರಮದಲ್ಲಿ ಗೆದ್ದವರ ಹೆಸರು ಘೋಷಿಸಲಾಗುತ್ತದೆ.
ಆದರೆ ಬೇರೆ ವಿಭಾಗದಲ್ಲಿ ಭಾರತೀಯ ಸಿನಿಮಾಗಳು ಇನ್ನೂ ಆಸ್ಕರ್ ರೇಸ್ನಲ್ಲಿವೆ. ಕಳೆದ ಬಾರಿ ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಕರ್ ಗೆದ್ದ 'ದಿ ಎಲಿಫಂಟ್ ವಿಸ್ಪರ್' ನ ನಿರ್ಮಾಪಕಿ ಗುನೀತ್ ಮೊಂಗಾ ನಿರ್ದೇಶಿಸಿರುವ ಲೈವ್ ಆಕ್ಷನ್ ಶಾರ್ಟ್ ಸಿನಿಮಾ 'ಅನುಜಾ' ಆಸ್ಕರ್ ರೇಸ್ನಲ್ಲಿದೆ. ಜೊತೆಗೆ 'ಅನುಜಾ' ನಾಮಿನೇಟ್ ಕೂಡ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.