ಬೆಂಗಳೂರು,ಡಿ.25(DaijiworldNews/TA): ಶಿವರಾಜ್ ಕುಮಾರ್ ಅವರಿಗೆ ಇಂದು ಅಮೆರಿಕದ ಮಿಯಾಮಿ ಕ್ಯಾನ್ಸರ್ ಸೆಂಟರ್ ನಲ್ಲಿ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಶಸ್ತ್ರ ಚಿಕಿತ್ಸೆ ಮಾಡಿದಂತಹ ವೈದ್ಯ ಮುರುಗೇಶ್ ಅವರೇ ಖುದ್ದಾಗಿ ವಿಡಿಯೋ ಮಾಡಿ ಶಿವಣ್ಣನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪುತ್ರಿ ನಿವೇದಿತಾ ಅಪ್ಪನ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳು ಸೇರಿದಂತೆ ಹಲವರಿಗೆ ಧನ್ಯವಾದ ಹೇಳಿದ್ದಾರೆ. ದೇವರ ಕೃಪೆಯಿಂದ ನನ್ನ ತಂದೆಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಇದಕ್ಕೆ ಪ್ರಮುಖ ಕಾರಣರಾಗಿರುವ, ಮಿಯಾಮಿ ಹೆಲ್ತ್ ಕೇರ್ ನಲ್ಲಿ ಅಸಾಧಾರಣ ಸೇವೆ ಒದಗಿಸಿದ ವೈದ್ಯಕೀಯ ತಂಡ ಮತ್ತು ಡಾ. ಮುರುಗೇಸನ್ ಮನೋಹರನ್ ಅವರ ಅಚಲ ಬೆಂಬಲ ಮತ್ತು ಕಾಳಜಿಗೆ ನಮ್ಮ ಹೃತ್ತೂರ್ವಕ ಧನ್ಯಾದಗಳನ್ನು ಅರ್ಪಿಸುತ್ತೇವೆ. ಅಭಿಮಾನಿ ದೇವರುಗಳಿಗೂ, ಕುಟುಂಬ ಸದಸ್ಯರಿಗೂ, ಸ್ನೇಹಿತರಿಗೂ ಮತ್ತು ಮಾಧ್ಯಮದ ಸದಸ್ಯರಿಗೂ ನಾವು ನಮ್ಮ ತುಂಬು ಹೃದಯದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ನಿಮ್ಮ ಪ್ರಾರ್ಥನೆಯ ಮೂಲಕ ನಮ್ಮನ್ನು ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತೇವೆ, ಧನ್ಯವಾದಗಳು’ ಎಂದಿದ್ದಾರೆ ನಿವೇದಿತಾ ಶಿವರಾಜಕುಮಾರ್.
ಶಿವರಾಜ್ ಕುಮಾರ್ ಅವರು ಬ್ಲಾಡರ್ ಕ್ಯಾನ್ಸರ್’ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕೆಲ ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಶಿವಣ್ಣ ಅಮೆರಿಕಕ್ಕೆ ತೆರಳುವಾಗ ಸಿನಿಮಾ ರಂಗದ ಹಲವು ಸೆಲೆಬ್ರಿಟಿಗಳ ಜೊತೆಗೆ ಹಲವಾರು ಮಂದಿ ಅಭಿಮಾನಿಗಳು ಮನೆಯ ಬಳಿ ಆಗಮಿಸಿ ಅವರನ್ನು ಬೀಳ್ಕೊಟ್ಟಿದ್ದರು.