ಹಾಸನ, ಜ.23(DaijiworldNews/TA):ಅರಣ್ಯ ಪ್ರದೇಶದಲ್ಲಿ ಕಾಂತಾರ 2 ಚಿತ್ರ ತಂಡವು ಮರಗಳನ್ನು ಕಡಿದಿದೆ ಎಂಬ ಆರೋಪಕ್ಕೆ ಕ್ಲೀನ್ ಚಿಟ್ ಸಿಕ್ಕಿದೆ. ಆರೋಪಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಎಸಿಎಫ್ ಹಾಗೂ ಯಸಳೂರು ಆರ್ಎಫ್ಓ ಚಿತ್ರೀಕರಣದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದೆ ಎನ್ನಲಾಗಿದೆ.
ಚಿತ್ರೀಕರಣದ ವೇಳೆ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಯಾವುದೇ ಸ್ಫೋಟ ಮಾಡಿಲ್ಲ, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದಿಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಚಿತ್ರೀಕರಣದ ವೇಳೆ ಸ್ಫೋಟ ಮಾಡಲಾಗಿದೆ. ಮರ ಕಡಿಯಲಾಗಿದೆ ಎಂದು ಕೆಲ ಸ್ಥಳೀಯರು ಆರೋಪ ಮಾಡಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಕೆ ಮಾಡಿದ್ದಾರೆ.
ಬಣ್ಣ ಬಳಿದ ಕೃತಕ ಮರಗಳನ್ನು ಚಿತ್ರೀಕರಣಕ್ಕೆ ಬಳಕೆ ಮಾಡಲಾಗಿದೆ. ಚಿತ್ರೀಕರಣದಿಂದ ಅರಣ್ಯ ಹಾಗೂ ಮರಗಳಿಗೆ ಯಾವುದೇ ಹಾನಿ ಮಾಡಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದರಿಂದ ಆರೋಪಕ್ಕೆ ತೆರೆ ಎಳೆಯಲಾಗಿದೆ.