ಮಂಗಳೂರು, ಫೆ.13(DaijiworldNews/TA): ಡಾಕ್ಟರ್ ರಾಜಕುಮಾರ್ರವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಪ್ರಪ್ರಥಮ ಬಾರಿಗೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ "ನಿಂಬಿಯಾ ಬನಾದ ಮ್ಯಾಗ" ಸಿನಿಮಾದ ಮೂಲಕ ಪ್ರವೇಶಿಸಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದ್ದು. ಮೊದಲ ಭಾಗಕ್ಕೆ ಪೇಜ್ 1 ಎಂದು, ಎರಡನೇ ಭಾಗಕ್ಕೆ ಪೇಜ್ 2 ಎಂದು ಕರೆಯಲಾಗಿದೆ.



ಸದ್ಯ "ನಿಂಬಿಯಾ ಬನಾದ ಮ್ಯಾಗ - ಪೇಜ್ 1" ಅನ್ನು ಇತ್ತೀಚಿಗಷ್ಟೇ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು ಪ್ರಮಾಣ ಪತ್ರವನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಬ್ರಿ, ಆಗುಂಬೆ, ಚಿಕ್ಕಮಗಳೂರು, ಮಲ್ಲoದೂರು ಮುಂತಾದ ಸಂಪೂರ್ಣ ಮಲೆನಾಡ ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಅಶೋಕ್ ಕಡಬ ಈ ಚಿತ್ರದ ಕಥೆ ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂಜಿಪಿಎಕ್ಸ್ ಎಂಟರ್ಪ್ರೈಸಸ್ ಲಾಛನದಲ್ಲಿ ವಿ. ಮಾದೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಬಹು ದೊಡ್ಡ ತಾರಾಗಣ ಒಳಗೊಂಡಿರುವ ಈ ಚಿತ್ರದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಸೂಪರ್ ಹಿಟ್ ಸಿನಿಮಾ ಮಿಡಲ್ ಕ್ಲಾಸ್ ಫ್ಯಾಮಿಲಿ ಹಾಗೂ ಸದ್ಯದಲ್ಲೇ ಬಿಡುಗಡೆಯಾಗಲಿರುವ ಗಜಾನನ ಕ್ರಿಕೆಟರ್ಸ್, ಜೈ, ಮೋಕೆದ ಸಿಂಗಾರಿ ಉಂತುದೆ ವೈಯ್ಯಾರಿ ತುಳು ಸಿನಿಮಾಗಳೂ ಸೇರಿದಂತೆ ನೂರಾರು ಬಹುಭಾಷಾ ಚಿತ್ರಗಳಲ್ಲಿ ಅಭಿನಯಿಸಿರುವ ಮಂಗಳೂರಿನ ಹೆಸರಾಂತ ನಟ, ನಿರ್ದೇಶಕ ಸಂದೀಪ್ ಮಲಾನಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಮೇಘಮಾಲೆ ಖ್ಯಾತಿಯ ಸುನಾದ್ ರಾಜ್. ಸಂಗೀತ. ತನುಶ್ರೀ ಪದ್ಮಾವಾಸಂತಿ, ಮೂಗು ಸುರೇಶ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಸಿದ್ದು ಕಂಚನಹಳ್ಳಿ ಯವರ ಛಾಯಾಗ್ರಹಣ, ಆರನ್ ಕಾರ್ತಿಕ್ ಸಂಗೀತ ಹಾಗೂ ಪಳನಿ ಡಿ ಸೇನಾಪತಿಯವರ ಹಿನ್ನಲೆ ಸಂಗೀತವಿದೆ. ವಿಶೇಷ ವೆಂದರೆ ಇದರಲ್ಲಿ ಮಲೆನಾಡಿನ ಜಾನಪದ ಗೀತೆಗಳು ಹಾಗೂ ತುಳು ನಾಡಿನ ಸಾಂಸ್ಕೃತಿಕ ಕಲಾಪ್ರಾಕಾರಗಳಾದ ಯಕ್ಷಗಾನದ ತುಣುಕುಗಳನ್ನು ಅಳವಡಿಸಲಾಗಿದೆ. ಫೆಬ್ರುವರಿ 28ರಂದು ಈ ಚಿತ್ರ ಕರ್ನಾಟಕದಾದ್ಯಂತ ತೆರೆಯ ಮೇಲೆ ಮೂಡಿ ಬರಲಿದೆ.