ಸುಳ್ಯ, ಫೆ.21(DaijiworldNews/TA): ಭಾರತೀಯ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ ಶ್ರೀಮತಿ ಯಸ್.ಜಾನಕಿ ಯವರು ಇಂದು ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿದರು. ಇವರನ್ನು ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸಹಾಯಕ ಕಾರ್ಯನಿರ್ವಾಹಣಾ ಅಧಿಕಾರಿ ಯೇಸುರಾಜ್ ಹಾಗೂ ಸುಬ್ರಹ್ಮಣ್ಯದ ನಾಗರಿಕರ ಪರವಾಗಿ ಗ್ರಾಮ ಪಂಚಾಯಿತ್ ಸದಸ್ಯ ಹರೀಶ ಇಂಜಾಡಿಯವರು ಶಾಲು, ಪ್ರಸಾದ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಜಾನಕಿಯಮ್ಮಾ ಎಂದೇ ಪ್ರಸಿದ್ದರಾಗಿರುವ ಎಸ್. ಜಾನಕಿ ಅವರು ಭಾರತದ ಬಹುತೇಕ ಎಲ್ಲಾ ಅಂದರೆ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಹಿಂದಿ, ಸಿಂಹಳ, ತುಳು, ಬಡಗ, ಬಂಗಾಳಿ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ, ಸಿಂಧಿ ಮುಂತಾದ 12ಕ್ಕೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ಸಿಂಹಳ, ಜಪಾನಿ, ಲ್ಯಾಟಿನ್, ಅರೇಬಿಕ್ ಒಳಗೊಂಡಂತೆ ಇತರ ಭಾಷೆಗಳಲ್ಲಿ ಸೇರಿದಂತೆ ಸುಮಾರು 48ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿ ಜನಜನಿತವಾಗಿದ್ದಾರೆ. ಅವರು ಹೆಚ್ಚಿನ ಹಾಡುಗಳನ್ನು ಕ್ರಮವಾಗಿ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಡಿದ್ದಾರೆ.
ಜಾನಕಿಯಮ್ಮ ಅವರಿಗೆ ನಾಲ್ಕು ರಾಷ್ಟ್ರ ಪ್ರಶಸ್ತಿಗಳು,ಸೇರಿದಂತೇ ಸುಮಾರು ಮೂವತ್ತು ರಾಜ್ಯ ಪ್ರಶಸ್ತಿಗಳೂ ದೊರೆತಿವೆ. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿದೆ. 2013 ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನು ಎಸ್. ಜಾನಕಿ ಅವರಿಗೆ ಘೋಷಿಸಿದಾಗ, ಪದ್ಮ ಪ್ರಶಸ್ತಿಗಳಲ್ಲಿ ದಕ್ಷಿಣ ಭಾರತೀಯರ ಬಗ್ಗೆ ಅಸಡ್ಡೆ ಇರುವುದನ್ನು ವಿರೋಧಿಸಿ, ಎಸ್.ಜಾನಕಿಯವರು ಈ ಪ್ರಶಸ್ತಿಯನ್ನು ಅಂದು ತಿರಸ್ಕರಿಸಿದ್ದರು. ದೇವಸ್ಥಾನಕ್ಕೆ ಜಾನಕಿಯವರು ಆಗಮಿಸಿದ ವೇಳೆ ಶಿಷ್ಟಾಚಾರ ವಿಭಾಗದ ಜಯರಾಮ ರಾವ್, ಯಜ್ಞೇಶ್ ಆಚಾರ್, ಮಹೇಶ್ ಸೇರಿದಂತೆ ಮತ್ತಿತರರು ಜತೆಗಿದ್ದರು.