ಮ್ಯಾಡ್ರಿಡ್, ಫೆ.23 (DaijiworldNews/AA): ತಮಿಳು ನಟ ಅಜಿತ್, ಕಾರು ರೇಸಿಂಗ್ನಲ್ಲಿ ಅತಿಯಾದ ಆಸಕ್ತಿ ಹೊಂದಿದ್ದು, ವಿದೇಶಗಳಲ್ಲಿ ವೃತ್ತಿಪರ ರೇಸಿಂಗ್ನಲ್ಲಿ ಅವರು ಭಾಗವಹಿಸುತ್ತಾರೆ. ಇದೀಗ ಸ್ಪೇನ್ನಲ್ಲಿ ನಡೆದ ರೇಸ್ನಲ್ಲಿ ನಟ ಅಜಿತ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.

ಸ್ಪೇನ್ನ ವೇಲೆನ್ಸಿಯಾದಲ್ಲಿ ನಡೆದ ರೇಸ್ನಲ್ಲಿ ಅಜಿತ್ ಭಾಗವಹಿಸಿದ್ದು, ಈ ವೇಳೆ ಅವರ ಕಾರು ಇನ್ನೊಂದು ಕಾರಿಗೆ ಹಿಂಭಾಗದಿಂದ ಡಿಕ್ಕಿಯಾಗಿದೆ. ಪರಿಣಾಮ ಅಜಿತ್ ಅವರ ಕಾರು ಹಲವಾರು ಬಾರಿ ಪಲ್ಟಿಯಾಗಿ ನಿಂತಿದೆ. ಅಪಘಾತದಲ್ಲಿ ಅಜಿತ್ಗೆ ಯಾವುದೇ ಗಾಯಗಳಾಗಿಲ್ಲ. ಅವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಈ ಅಪಘಾತದ ವೀಡಿಯೊವನ್ನು ಅಜಿತ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ರೇಸ್ನ 5ನೇ ಸುತ್ತಿನವರೆಗೆ ಅದ್ಭುತವಾಗಿ ಕಾರು ಓಡಿಸಿದ ಅಜಿತ್ 14ನೇ ಸ್ಥಾನದಲ್ಲಿದ್ದರು. ಆದರೆ 6ನೇ ರೌಂಡ್ನಲ್ಲಿ ಎರಡು ಬಾರಿ ಅವರ ಕಾರು ಅಪಘಾತಕ್ಕೊಳಗಾಯಿತು. ಅಜಿತ್ ಅವರ ಮ್ಯಾನೇಜರ್ ನೀಡಿರುವ ಮಾಹಿತಿಯಂತೆ ಅಜಿತ್ ಅವರದ್ದು ಈ ಅಪಘಾತದಲ್ಲಿ ತಪ್ಪಿಲ್ಲ, ಬದಲಿಗೆ ಬೇರೆ ವಾಹನಗಳಿಂದಾಗಿ ಅಜಿತ್ ಅವರ ಕಾರು ಅಪಘಾತಕ್ಕೊಳಗಾಯಿತು ಎಂದಿದ್ದಾರೆ.