ಉಡುಪಿ, ಮಾ.05(DaijiworldNews/TA): ತುಳುನಾಡಿನ ಶಕ್ತಿಪೀಠವಾದ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಶ್ರೀ ಮಾರಿಯಮ್ಮನಿಗೆ ಕಲ್ಯ ವೇದಮೂರ್ತಿ ಶ್ರೀನಿವಾಸ ತಂತ್ರಿಗಳಿಂದ ಮಹಾ ಬ್ರಹ್ಮಕಲಶಾಭಿಷೇಕ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಈ ಸಂದರ್ಭದಲ್ಲಿ ಕಾಪು ಮಾರಿಯಮ್ಮನ ದರ್ಶನಕ್ಕೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಆಗಮಿಸಿದ್ದು, ಕುಟುಂಬಸ್ಥರೊಂದಿಗೆ ಆಗಮಿಸಿ ಸೇವೆ ಸಲ್ಲಿಸಿದರು.

ಬ್ರಹ್ಮಕಲಶೋತ್ಸವ ಕೊನೆಯ ದಿನ ದೇವಳದಿಂದ ಪೂಜಾ ಹೆಗ್ಡೆ ಅವರನ್ನು ಗೌರವಿಸಲಾಯಿತು. ಫೆಬ್ರವರಿ 25 ರಿಂದ ಆರಂಭವಾದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾರ್ಚ್ 5 ರ ತನಕ ಹಬ್ಬದಂತೆ ದಿನವಿಡಿ ಕಾರ್ಯಕ್ರಮ ನಡೆದವು.
ಕಾಪು ಮಾರಿಯಮ್ಮ ದೇವರಿಗೆ ನೂತನ ರಜತರಥ, ಸ್ವರ್ಣ ಗದ್ದುಗೆ, 160ಅಡಿ ಎತ್ತರದ ಭವ್ಯಗೋಪುರ, ಮೂಲಪೀಠದಲ್ಲಿ ಸಿಂಹ, ೯ ಮುಚ್ಚಿಗೆಗಳು, ಅಷ್ಟಧಿಕ್ಪಾಲಕರು, ಇಡೀ ದೇವಸ್ಥಾನವು ಭಕ್ತಾಧಿಗಳಿಗೆ ವಿಜೃಂಭಣೆಯಿಂದ ಕಣ್ಮನ ಸೆಳೆಯುವಂತೆ ಮಾಡಿತ್ತು. ಒಟ್ಟಾರೆ 9 ದಿನಗಳ ಕಾಲ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅದ್ದೂರಿ ಉತ್ಸವ ನಡೆದಿದ್ದು ಊರಿನ ಹಾಗೂ ಪರ ಊರಿನ ಭಕ್ತರು ದೇವಿಯ ಆಶಿರ್ವಾದ ಪಡೆದುಕೊಂಡರು.