ಬೆಂಗಳೂರು, ಮಾ.07(DaijiworldNews/TA): ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ದಕ್ಷಿಣ ಭಾರತ ಚಿತ್ರರಂಗದತ್ತ ಮುಖ ಮಾಡಿದ್ದು ಕನ್ನಡ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಸುಜಯ್ ಶಾಸ್ತ್ರಿ ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ‘8’ ನಲ್ಲಿ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅನುರಾಗ್ ಕಶ್ಯಪ್ ಪಾಲಿಗೆ ಇದು ಅವರ ಮೊದಲ ಕನ್ನಡ ಸಿನಿಮಾ. ಇನ್ನು ಅನುರಾಗ್ ಕಶ್ಯಪ್ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಮಹಾರಾಜ’ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅವರಿಗೆ ಹಲವು ಅವಕಾಶಗಳು ತೆರೆದುಕೊಂಡಿವೆ.
ಫುಟ್ಬಾಲ್ ಆಟದ ಸುತ್ತ ನಡೆಯುವ ಕಥೆ '8' ಚಿತ್ರದಲ್ಲಿದೆ. 'ನೊಂದ ನಾಣಿ' ಯೂಟ್ಯೂಬ್ ಸರಣಿ ಮೂಲಕ ಸುಜಯ್ ಗಮನ ಸೆಳೆದಿದ್ದರು. 'ಬೆಲ್ಬಾಟಂ' ಚಿತ್ರದಲ್ಲಿ ಸಗಣಿ ಪಿಂಟೋ ಎಂಬ ಪಾತ್ರದಲ್ಲಿ ನಟಿಸಿ ಸುಜಯ್ ಗಮನ ಸೆಳೆದಿದ್ದರು. ಈಗ ನಿರ್ದೇಶಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅನುರಾಗ್ ಕಶ್ಯಪ್ ಬೆಂಗಳೂರಿಗೆ ಬಂದು ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.