ಮುಂಬೈ, ಮಾ.11 (DaijiworldNews/AA): ಬಾಲಿವುಡ್ ನಟ ಶಾರುಖ್ ಖಾನ್ ಅವರು ಮುಂಬೈನಲ್ಲಿರುವ ತಮ್ಮ ಮನ್ನತ್ ಬಂಗಲೆಯನ್ನು ನವೀಕರಣ ಮಾಡಲು ಮುಂದಾಗಿದ್ದರು. ಆದರೆ ಸಾಮಾಜಿಕ ಕಾರ್ಯಕರ್ತರೊಬ್ಬರು ನವೀಕರಣ ಕಾರ್ಯ ನಿಲ್ಲಿಸಬೇಕು ಎಂದು ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಶಾರುಖ್ ಖಾನ್ ಅವರು ಹಲವು ವರ್ಷಗಳಿಂದ ಮನ್ನತ್ ಕಟ್ಟಡದಲ್ಲಿ ವಾಸವಾಗಿದ್ದಾರೆ. ಆರು ಅಂತಸ್ತಿನ ಮನ್ನತ್ ಕಟ್ಟಡಕ್ಕೆ ಇನ್ನೂ ಎರಡು ಅಂತಸ್ತನ್ನು ಸೇರಿಸಿ ನವೀಕರಿಸುವ ಆಲೋಚನೆಯನ್ನು ಶಾರುಖ್ ಖಾನ್ ಅವರು ಹೊಂದಿದ್ದರು. ಹೀಗಾಗಿ ಬೇರೆಡೆ ಫ್ಲ್ಯಾಟ್ ಕೂಡ ತೆಗೆದುಕೊಂಡಿದ್ದ ಅವರು, ನವೀಕರಣ ಕಾರ್ಯ ಮುಗಿಯೋವರೆಗೆ ಅಲ್ಲಿ ವಾಸಿಸಲು ನಿರ್ಧರಿಸಿದ್ದರು.
ಆದರೆ ಸಾಮಾಜಿಕ ಕಾರ್ಯಕರ್ತ ಸಂತೋಷ್ ದೌಂಡ್ಕರ್ ಅವರು ಎನ್ಜಿಟಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶಾರುಖ್ ಖಾನ್ ಹಾಗೂ ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಕಟ್ಟಡ ನವೀಕರಣ ಮಾಡಲು ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪ ಮಾಡಿದ್ದಾರೆ. ಶಾರುಖ್ ಅವರ ನಿವಾಸವನ್ನು 'ಗ್ರೇಡ್ 3 ಹೆರಿಟೇಜ್ ಸ್ಟ್ರಕ್ಚರ್' ಅಡಿಯಲ್ಲಿ ಸೇರಿಸಲಾಗಿದೆ. ಆದ್ದರಿಂದ ಇದನ್ನು ನವೀಕರಿಸಲು ಸರಿಯಾದ ಒಪ್ಪಿಗೆ ಪಡೆದುಕೊಳ್ಳಲೇಬೇಕಿದೆ.
ಈ ಬಗ್ಗೆ ಸೂಕ್ತ ದಾಖಲೆ ಸಲ್ಲಿಸುವಂತೆ ಸಂತೋಷ್ ಅವರಿಗೆ ಎನ್ಜಿಟಿ ನಿರ್ದೇಶಿಸಿದೆ. ಒಂದು ವೇಳೆ ಸಂತೋಷ್ ಅವರು ಸೂಕ್ತ ದಾಖಲೆ ಸಲ್ಲಿಸುವಲ್ಲಿ ವಿಫಲರಾದರೆ ಶಾರುಖ್ ಮನೆಯ ನವೀಕರಣ ಕೆಲಸ ಮುಂದುವರಿಯಲಿದೆ. ಸರಿಯಾದ ದಾಖಲೆ ಸಲ್ಲಿಸಿದರೆ ಶಾರುಖ್ ಮನೆಯ ಕೆಲಸಗಳು ನಿಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.