ಬೆಂಗಳುರು, ಮಾ.17(DaijiworldNews/TA) : ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್ಕುಮಾರ್ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಅಪ್ಪು ಇಂದು ನಮ್ಮೊಂದಿಗೆ ಇದ್ದಿದ್ದರೆ ಇವತ್ತಿಗೆ 50 ವರ್ಷ ತುಂಬಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಬೇಕಿತ್ತು. ಆದರೆ ಕಾಲ ನಮ್ ಕೈಲಿಲ್ಲ ಪರರಿಗಾಗಿ ನಿರಂತರವಾಗಿ ಮಿಡಿದ ಜೀವ ಪರಲೋಕ ಸೇರಿದೆ. ಆದ್ರೂ ಪ್ರತಿವರ್ಷ ಮಾರ್ಚ್ 17 ಬಂತೆಂದರೆ ಕರುನಾಡ ಯುವರತ್ನ ಪುನೀತ್ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿ ಸಂಭ್ರಮಿಸುತ್ತಾರೆ. ಜೊತೆಗಿರದ ಜೀವ ಎಂದಿಗಿಂತ ಜೀವಂತ ಎನ್ನುವಂತೆ ಮರೆಯಾದ ಮಾಣಿಕ್ಯನನ್ನು ಮನದಲ್ಲಿ ದೇವರಂತೆ ಪೂಜೆ ಮಾಡುತ್ತಾರೆ. ಈ ಬಾರಿ ಕೂಡ ಅಂತೆಯೇ ಅಪ್ಪು ಜನ್ಮದಿನ ಆಚರಣೆ ಮುಂದುವರೆದಿದೆ. ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಸ್ಮರಿಸಲಾಗುತ್ತಿದೆ.


ಬಾಲನಟನಾಗಿಯೇ ಅಭಿಮಾನಿಗಳ ಮನಗೆದ್ದ ಕನ್ನಡ ಮಾಣಿಕ್ಯ ಹೀರೋ ಆಗಿ ಕಮಾಲ್ ಮಾಡಿದ್ರು. ಅಷ್ಟೇ ಅಲ್ಲದೆ ತೆರೆಯ ಮೇಲೆ ಮಾತ್ರವಲ್ಲ ನಿಜಜೀವನದಲ್ಲಿಯೂ ಅದೇ ಆದರ್ಶಗಳೊಂದಿಗೆ ಬೆಳೆದ ದೇಶ ವಿದೇಶದಲ್ಲೂ ಅಭಿಮಾನಿಗಳನ್ನು ಗಳಿಸಿದ ನಿಸ್ವಾರ್ಥ ಜೀವವಾಗಿದ್ದರು. 50ನೇ ವರ್ಷದ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಪುನೀತ್ ರಾಜ್ಕುಮಾರ್ ಅವರ ಮೊದಲ ಸಿನಿಮಾ ‘ಅಪ್ಪು’ ಮರು ಬಿಡುಗಡೆ ಆಗಿದೆ. ಅಭಿಮಾನಿಗಳು ಅದೇ ಉತ್ಸಾಹದಿಂದ ಮತ್ತೆ ಅಪ್ಪು ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.
ಪುನೀತ್ ಸಮಾಧಿಗೆ ಮಕ್ಕಳ ಜೊತೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ :
ರಾಜ್ ಕುಟುಂಬದ ಕುಡಿ ಕಣ್ಮರೆಯಾಗಿದ್ದು ಕುಟುಂಬಕ್ಕೆ ತುಂಬಲಾರದ ನಷ್ಟ. ಜೊತೆಗಿರದ ಜೀವವನ್ನು ದಿನಾ ಜಪಿಸೋ ಕುಟುಂಬ ಇಂದು ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪುನೀತ್ ಸಮಾಧಿಗೆ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್ ಹಾಗೂ ಮಕ್ಕಳ ಜೊತೆ ಪೂಜೆ ಮಾಡಿದ್ದಾರೆ. ಅಪ್ಪುವಿಗಾಗಿ ತಯಾರಿಸಿದ ಕೇಕ್ ಅನ್ನು ಅಪ್ಪು ಪುತ್ರಿಯರು ಸ್ಮಾರಕದ ಮುಂದೆ ಇರಿಸಿದ್ದಾರೆ. ಈ ಮೂಲಕ ತಂದೆ ಹುಟ್ಟುಹಬ್ಬಕ್ಕೆ ಪುತ್ರಿಯರು ಶುಭಕೋರಿದ್ದಾರೆ. ಅಪ್ಪು ಇಷ್ಟಪಡುವ ನೆಚ್ಚಿನ ತಿಂಡಿಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ.
ಬರ್ತ್ಡೇ ಪ್ರಯುಕ್ತ ಅಭಿಮಾನಿಗಳಿಂದ ಸಮಾಜಮುಖಿ ಕೆಲಸ :
ಪುನೀತ್ ರಾಜ್ಕುಮಾರ್ ಬರ್ತ್ಡೇ ಪ್ರಯುಕ್ತ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತದೆ. ಈ ಬಾರಿಯೂ ಆ ಕಾರ್ಯ ಮುಂದುವರಿದಿದೆ. ಅಪ್ಪು ಅಭಿಮಾನಿಗಳು ಅನ್ನದಾನ, ರಕ್ತದಾನ, ನೇತ್ರದಾನ ನೋಂದಣಿ ಸೇರಿದಂತೆ ಅನೇಕ ಬಗೆಯ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಪುನೀತ್ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಕರುನಾಡ ಅರಸನನ್ನು ಸ್ಮರಿಸಲಾಗುತ್ತಿದೆ.
ಅದೇನೆ ಆದ್ರೂ ವರ್ಷಗಳೆಷ್ಟೇ ಉರುಳಿದ್ರು ಅಭಿಮಾನ ಅನ್ನೋದು ಎಂದಿಗೂ ಕಡಿಮೆ ಆಗೋದೆ ಇಲ್ಲ ಅನ್ನೋದಕ್ಕೆ ಪರಮಾತ್ಮನ ಹುಟ್ಟುಹಬ್ಬ ಆಚರಣೆಯೇ ಜೀವಂತ ನಿದರ್ಶನ. ಅಪ್ಪು ಕೇವಲ ನಟನಾಗಿ ಅಭಿಮಾನಿಗಳ ಮನದಲ್ಲಿ ಉಳಿದಿಲ್ಲ ಬದಲಾಗಿ ತಮ್ಮ ಸಮಾಜ ಸೇವೆಯಿಂದಲೂ ಅವರು ಅಭಿಮಾನಿಗಳ ಪಾಲಿಗೆ ದೇವರೇ ಆಗಿದ್ದಾರೆ. ಕರುನಾಡಿನ ಪ್ರತಿ ಅಭಿಮಾನಿಯ ಮಾತು ಒಂದೇ ಅದುವೇ ಅಪ್ಪು ಕಣ್ಣಿಂದ ಮರೆಯಾಗಿರಬಹುದು ಹೃದಯದಲ್ಲಿ ಅವರೆಂದಿಗೂ ನಮ್ಮ ಉಸಿರಲ್ಲಿ ಬೆರೆತಿದ್ದಾರೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ.