ಮಂಗಳೂರು, ಮಾ.19 (DaijiworldNews/AK): ಕೊಂಕಣಿ ಚಲನಚಿತ್ರ ’ಬಾಪಾಚೆ ಪುತಾಚೆ ನಾಂವಿಂ ’ ರಿಲೀಸ್ ಡೇಟ್ ಫಿಕ್ಸ್..?ಬರಹಗಾರರೂ, ಚಿಂತಕರೂ ಆದ ಸ್ಟ್ಯಾನಿ ಬೇಳ ಇವರ ಚೊಚ್ಚಲ ನಿರ್ದೇಶನದ ಕೊಂಕಣಿ ಚಲನಚಿತ್ರ ನಿರ್ಮಾಣದ ಅಂತಿಮ ಹಂತದಲ್ಲಿದೆ ಎಂಬ ಸುದ್ಧಿಗಳ ನಡುವೆ ಕೊಂಕಣಿ ಚಿತ್ರಪ್ರೇಮಿಗಳಲ್ಲಿ ಚಿತ್ರ ಯಾವಾಗ ಬಿಡುಗಡೆಯಾಗುತ್ತೆ ಎಂಬ ಕುತೂಹಲ ಹೆಚ್ಚಾಗಿದೆ.

ಚಿತ್ರೀಕರಣದ ಆರಂಭದ ದಿನದಿಂದಲೂ ಚಿತ್ರದ ಕುರಿತು ಹೆಚ್ಚು ಮಾತನಾಡದ ಚಿತ್ರ ನಿರ್ಮಾಣ ತಂಡದ ನಡೆ ಕೊಂಕಣಿಯ ಚಿತ್ರರಂಗ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಮಾಜದ ಆಗು ಹೋಗುಗಳ ಕುರಿತ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಬರೆಯುವ ನಿರ್ದೇಶಕರು ತಮ್ಮದೇ ಚಿತ್ರದ ಪೋಸ್ಟರನ್ನು ಈ ವರೆಗೆ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿಲ್ಲ ಎಂಬುವುದ್ ಇಲ್ಲಿ ಗಮನಾರ್ಹ ಸಂಗತಿ.
ಜುಲೈ ತಿಂಗಳಲ್ಲಿ ಚಿತ್ರಬಿಡುಗಡೆಯಾಗಲಿದೆ ಎಂಬ ಅನಧಿಕೃತ ಮಾಹಿತಿ ಕೊಂಕಣಿ ಚಲನಚಿತ್ರ ಪ್ರೇಮಿಗಳ ನಡುವೆ ಹರಿದಾಡುತ್ತಿದ್ದರೂ ನವೆಂಬರ್ ತಿಂಗಳು ಫಿಕ್ಸ್ ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಚಿತ್ರತಂಡ ಈ ವರೆಗೆ ಚಿತ್ರ ಬಿಡುಗಡೆಯ ಕುರಿತು ಅಧಿಕೃತ ಘೋಷಣೆ ಮಾಡಿಲ್ಲ.
ಸ್ಟ್ಯಾನಿ ಬೇಳ ಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ’ಬಾಪಾಚೆ ಪುತಾಚೆ ನಾಂವಿಂ’ ಚಿತ್ರಕ್ಕೆ ಪ್ರತಿಭಾನ್ವಿತ ಜೋಯಲ್ ಶಮನ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅನಿವಾಸಿ ಉದ್ಯಮಿ ಮೈಕಲ್ ಡಿಸೋಜಾ ನಿರ್ಮಾಣದ ಈ ಚಿತ್ರ ದಾಯ್ಜಿವರ್ಲ್ಡ್ ಫಿಲ್ಮ್ಸ್ ಬ್ಯಾನೆರಿನಡಿ ತಯಾರಾಗುತ್ತಿದೆ. ಇನ್ನೋರ್ವ ಪ್ರತಿಭಾನ್ವಿತ ನಿರ್ದೇಶಕ ಅರ್ಜುನ್ ಲೂವಿಸ್ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ವಹಿಸುತ್ತಿದ್ದಾರೆ.
ಕೊಂಕಣಿಯ ಅನುಭವಿ ಕಲಾವಿದರನ್ನು ಹೊಂದಿರುವ ಚಿತ್ರವು ಇದೀಗ ಡಬ್ಬಿಂಗ್ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಚಿತ್ರಕ್ಕೆ ಕೆವಿನ್ ಮಸ್ಕರೇನ್ಹಸ್ ಸಂಕಲನವಿದ್ದು ಸಂಜಯ್ ರೊಡ್ರಿಗಸ್ ಸಂಗೀತ ನೀಡಿದ್ದಾರೆ. ಲೋಯ್ ವಾಲೈಂಟೀನ್ ಸೌಂಡ್ ಮಿಕ್ಸಿಂಗ್ ಜವಾಬ್ದಾರಿ ಹೊತ್ತಿದ್ದಾರೆ.
ತಮ್ಮ ಬರಹ ಹಾಗೂ ಚಿಂತನೆಗಳಲ್ಲಿ ಸಮಾಜಮುಖಿ ವಿಷಯಗಳಿಗೆ ಪ್ರಾಧನ್ಯೆತೆ ನೀಡುವ ಸ್ಟ್ಯಾನಿ ಬೇಳ ತಮ್ಮ ಚೊಚ್ಚಲ ಚಿತ್ರದ ಮೂಲಕ ಮನೋರಂಜನೆಯ ಹೊರತಾಗಿ ಮಹತ್ತರ ಸಾಮಾಜಿಕ ವಿಷಯವೊಂದನ್ನು ಪ್ರಸ್ತುತಪಡಿಸಿದ್ದಾರೆ ಎಂದು ಬಾಪಾಚೆ ಪುತಾಚೆ ನಾಂವಿಂ ಚಿತ್ರತಂಡದಿಂದ ದೊರಕುವ ಪ್ರಾಥಮಿಕ ಮಾಹಿತಿಯಾಗಿದೆ.