ಮುಂಬೈ, ಜು. 04 (DaijiworldNews/AA): ಹಾಲಿವುಡ್ನ ವಾಕ್ ಆಫ್ ಫೇಮ್ನಲ್ಲಿ ಸ್ಥಾನ ಪಡೆದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇತಿಹಾಸ ನಿರ್ಮಿಸಿದ್ದಾರೆ. ಹಾಲಿವುಡ್ನ ವಾಕ್ ಆಫ್ ಫೇಮ್ ಪಡೆದ ಮೊದಲ ಭಾರತದ ನಟಿ ಎಂಬ ಖ್ಯಾತಿಗೆ ನಟಿ ಪಾತ್ರರಾಗಿದ್ದಾರೆ.

ಅಮೆರಿಕದ ಲಾಸ್ ಏಂಜಲೀಸ್ನ ಹಾಲಿವುಡ್ ಬೌಲೆವಾರ್ಡ್ನಲ್ಲಿ ಹಾಲಿವುಡ್ನ ವಾಕ್ ಆಫ್ ಫೇಮ್ ಇದೆ. ಇಲ್ಲಿ ನೆಲದ ಮೇಲೆ ಸ್ಟಾರ್ ರೀತಿ ಆಕೃತಿಯನ್ನು ನಿರ್ಮಿಸಿ ಅದರಲ್ಲಿ ನಟ-ನಟಿಯರ ಹೆಸರುಗಳನ್ನು ಬರೆದಿರಲಾಗುತ್ತದೆ. ಇದನ್ನು ವಾಕ್ ಆಫ್ ಫೇಮ್ ಎಂದು ಹೇಳಲಾಗುತ್ತದೆ. ಇದೀಗ ಈ ರಸ್ತೆಯಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಕೂಡ ನಕ್ಷತ್ರದಾಕೃತಿಯ ಒಳಗೆ ಸೇರಿಕೊಳ್ಳಲಿದೆ.
ಮೋಷನ್ ಪಿಕ್ಚರ್ ವಿಭಾಗದಲ್ಲಿ ದೀಪಿಕಾ ಪಡುಕೋಣೆ ಹೆಸರನ್ನು ವಾಕ್ ಆಫ್ ಫೇಮ್ಗೆ ಆಯ್ಕೆ ಮಾಡಲಾಗಿದೆ. 2026ನೇ ಸಾಲಿನಲ್ಲಿ ನಟಿಯ ಹೆಸರನ್ನು ನಮೂದಿಸಲಾಗುತ್ತದೆ. ಇನ್ನು ಈ ಗೌರವ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ ನಟಿ ದೀಪಿಕಾ.
ಇನ್ನು ಈ ಬಾರಿ ನಟಿ ದೀಪಿಕಾ ಪಡುಕೋಣೆ ಜೊತೆಗೆ ಖ್ಯಾತ ನಟಿ ಎಮಿಲಿ ಬ್ಲಂಟ್ ಸೇರಿದಂತೆ ಇನ್ನೂ ಕೆಲ ಕಲಾವಿದರು ವಾಕ್ ಆಫ್ ಫೇಮ್ ಗೌರವ ಪಡೆದುಕೊಂಡಿದ್ದಾರೆ. ಪ್ರತಿ ವರ್ಷ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ಗೆ ನೂರಾರು ನಾಮಿನೇಷನ್ಗಳು ಹಾಲ್ ಆಫ್ ಫೇಮ್ಗೆ ಬರುತ್ತವೆ. ಅವುಗಳಲ್ಲಿ ಕೇವಲ 20 ರಿಂದ 24 ಕಲಾವಿದರ ಹೆಸರನ್ನಷ್ಟೇ ಆಯ್ಕೆ ಮಾಡಲಾಗುತ್ತದೆ. ಅದರಂತೆ ಈ ಬಾರಿ ಆಯ್ಕೆಯಾದ ಕಲಾವಿದರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಹೆಸರು ಸಹ ಇದೆ.
ದೀಪಿಕಾ ಪಡುಕೋಣೆ ಹೆಸರನ್ನು ನಕ್ಷತ್ರದಲ್ಲಿ ಮಾಡಿ ಅದನ್ನು ರಸ್ತೆಗೆ ಅಳವಡಿಸಲಾಗುತ್ತದೆ. ಇದಕ್ಕಾಗಿ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ಗೆ ದೊಡ್ಡ ಮೊತ್ತದ ಹಣವನ್ನು ಕೂಡ ನೀಡಬೇಕಾಗಿದೆ. ಇನ್ಸ್ಟಾಲೇಷನ್ ಮತ್ತು ಮೇಂಟೇನೆನ್ಸ್ಗೆ 85 ಸಾವಿರ ಡಾಲರ್ ಅಂದರೆ ಸುಮಾರು 75 ಲಕ್ಷ ರೂಪಾಯಿಗಳನ್ನು ಯಾರು ನಾಮಿನೇಟ್ ಮಾಡಿರುತ್ತಾರೋ ಅವರು ನೀಡಬೇಕಿರುತ್ತದೆ. ಇದೀಗ ದೀಪಿಕಾ ಪಡುಕೋಣೆ ಹೆಸರನ್ನು ಯಾರು ನಾಮಿನೇಟ್ ಮಾಡಿದ್ದರೊ ಅವರು ಈ ಹಣವನ್ನು ತೆರಬೇಕಾಗಿದೆ.