ಬೆಂಗಳೂರು, ಜು. 04 (DaijiworldNews/AA): ನಟಿ ಭಾವನ ರಾಮಣ್ಣ ಅವರು ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ. ಅವರೀಗ ಆರು ತಿಂಗಳ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.

ನಟಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಭಾವನಾ ಸಿಂಗಲ್ ಜೀವನ ನಡೆಸುತ್ತಿದ್ದಾರೆ. ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭ ಧರಿಸಿರುವ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ ವಿರೋಧ ವ್ಯಕ್ತವಾಗುತ್ತಿದೆ.
ತಾಯಿ ಆಗುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, "ಇದು ನನ್ನ ಹೊಸ ಅಧ್ಯಾಯ, ಹೊಸ ಲಯ, ನಾನು ಇದನ್ನು ಹೇಳುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ, ಆದರೆ ಇಲ್ಲಿ ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ನನಗೆ 20-30 ವರ್ಷ ಇದ್ದಾಗ ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. 40 ವರ್ಷ ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ, ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಸೆಂಟರ್ಗಳು ನನ್ನನ್ನು ತಿರಸ್ಕಾರ ಮಾಡಿದ್ದವು. ಬಳಿಕ ನಾನು ಡಾ. ಸುಷ್ಮಾರನ್ನು ಭೇಟಿಯಾದೆ. ಅವರು ನನ್ನ ಮೇಲೆ ಯಾವುದೇ ಯಾವುದೇ ಕೀಳು ಭಾವನೆ ಪಡದೇ ಸ್ವಾಗತಿಸಿದ್ರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ" ಎಂದು ತಿಳಿಸಿದ್ದಾರೆ.
"ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪಕ್ಕದಲ್ಲಿ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು, ಆದರೆ ನನ್ನ ಮನಸ್ಸಿನಲ್ಲಿ ನಾನು ಎಲ್ಲದಕ್ಕೂ ಸಿದ್ಧಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ದಯೆ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಬೆಳಯುತ್ತಾರೆ. ನಾನು ರೆಬೆಲ್ ಆಗಲು ಈ ಮಾರ್ಗವನ್ನು ಆರಿಸಿಕೊಂಡಿಲ್ಲ, ನನ್ನ ಸತ್ಯವನ್ನು ಗೌರವಿಸಲು ನಾನು ಈ ಮಾರ್ಗವನ್ನ ಆಯ್ಕೆ ಮಾಡಿಕೊಂಡೆ. ನನ್ನ ಕಥೆ, ಒಬ್ಬಳೇ ಒಬ್ಬಳು ಮಹಿಳೆಯಾದರೂ ತನ್ನನ್ನು ತಾನು ನಂಬುವಂತೆ ಪ್ರೇರೇಪಿಸಿದರೆ ಸಾಕು. ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ ಹಾಗೂ ಅದೇ ಎಲ್ಲವೂ ಆಗಿರುತ್ತದೆ" ಎಂದು ಪೋಸ್ಟ್ ಮಾಡಿದ್ದಾರೆ.