ಬೆಂಗಳೂರು, ಜು. 28 (DaijiworldNews/AA): ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ರಮ್ಯಾ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ನಟಿಗೆ ಸಂದೇಶ ಕಳಿಸಿರುವ ಅನೇಕರು ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಅಂತಹ ಅಶ್ಲೀಲ ಸಮದೇಶಗಳನ್ನು ರಮ್ಯಾ ಅವರು ಬಹಿರಂಗಪಡಿಸಿದ್ದಾರೆ. ಇನ್ನು ಈ ವಿಚಾರವಾಗಿ ರಮ್ಯಾ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಇನ್ನು ಇದರ ಬೆನ್ನಲ್ಲೇ ನಟಿ ರಮ್ಯಾಗೆ ರಾಜ್ಯ ಮಹಿಳಾ ಆಯೋಗ ಬೆಂಬಲ ನೀಡಿದೆ. ಅಶ್ಲೀಲವಾಗಿ ಸಂದೇಶ ಕಳಿಸಿದವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಕೊಳ್ಳಬೇಕು ಎಂದು ಕೋರಿ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ.
ಮಾಜಿ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯಾ ಅವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ. ಆದ್ದರಿಂದ ಈ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.