ಮುಂಬೈ, ಆ. 09 (DaijiworldNews/TA): ಸದ್ಯ ‘ಕೆಡಿ ದಿ ಡೆವಿಲ್’ ಸಿನಿಮಾದ ಶೂಟಿಂಗ್ನಲ್ಲಿರುವ ನಟ ಧ್ರುವ ಸರ್ಜಾ, ಸಿನಿಮಾ ಪಾತ್ರಕ್ಕಿಂತ ಹೊರಗೂ ಸುದ್ದಿಯಲ್ಲಿದ್ದಾರೆ. “ಜಗ್ಗು ದಾದ” ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರಾದ ರಾಘವೇಂದ್ರ ಹೆಗ್ಡೆ ಅವರು ಧ್ರುವ ಸರ್ಜಾ ವಿರುದ್ಧ ಭಾರೀ ಹಣ ವಂಚನೆಯ ಆರೋಪ ಮಾಡಿದ್ದಾರೆ. ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದು, ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

'ದಿ ಸೋಲ್ಜರ್' ಎಂಬ ಸಿನಿಮಾ ಪ್ರಾರಂಭಕ್ಕೂ ಮುನ್ನ ಧ್ರುವ ಅವರು ಫ್ಲಾಟ್ ಖರೀದಿಸಲು 3 ಕೋಟಿ ರೂಪಾಯಿ ಹಣವನ್ನು ಕೇಳಿದ್ದಾರೆ ಎಂದು ಹೆಗ್ಡೆ ಆರೋಪಿಸಿದ್ದಾರೆ. ಧ್ರುವ ಸರ್ಜಾ ತೋರಿಸಿದ್ದ ಭರವಸೆ ನಂಬಿದ ನಿರ್ಮಾಪಕ, ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು, 3.15 ಕೋಟಿ ರೂಪಾಯಿಗಳನ್ನು ನಟನಿಗೆ ನೀಡಿದ್ದಾರೆ. ನಂತರ 2019ರಲ್ಲಿ ಅಧಿಕೃತ ಒಪ್ಪಂದಕ್ಕೂ ಸಹಿ ಹಾಕಲಾಗಿತ್ತು. ಚಿತ್ರ ಶೂಟಿಂಗ್ ಜನವರಿ 2020ರಲ್ಲಿ ಪ್ರಾರಂಭವಾಗಿ ಜೂನ್ ವೇಳೆಗೆ ಮುಗಿಯಬೇಕಿತ್ತು. ಆದರೆ ಕೊವಿಡ್ ಲಾಕ್ಡೌನ್ ಕಾರಣವಾಗಿ ಸಿನಿಮಾ ವಿಳಂಬವಾಯಿತು.
ರಾಘವೇಂದ್ರ ಹೆಗ್ಡೆ ಅವರ ಪ್ರಕಾರ, ಲಾಕ್ಡೌನ್ ಅಂತ್ಯವಾದ ನಂತರವೂ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿಲ್ಲ. ಅನೇಕ ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಲಭಿಸಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಈ ನಡುವೆ ಸ್ಕ್ರಿಪ್ಟ್ ರೈಟರ್ಗಳಿಗೆ ಕೂಡ ಧ್ರುವ ಅವರ ನಿರ್ದೇಶನದಂತೆ ಹಣ ನೀಡಲಾಗಿದ್ದು, ಒಟ್ಟಿನಲ್ಲಿ 3.43 ಕೋಟಿ ರೂಪಾಯಿಗಳನ್ನು ನಿರ್ಮಾಪಕ ಖರ್ಚು ಮಾಡಿದರೆಂದು ಆರೋಪಿಸಿದ್ದಾರೆ. ಬಡ್ಡಿ ಸೇರಿ ಈ ಹಣದ ಮೊತ್ತವು ಈಗ 9.58 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ರಾಘವೇಂದ್ರ ಹೆಗ್ಡೆ ನಿಖರ ದಾಖಲೆಗಳನ್ನು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಅಂಬೋಲಿ ಪೊಲೀಸ್ ಠಾಣೆ ಈ ಪ್ರಕರಣವನ್ನು ದಾಖಲಿಸಿಕೊಂಡಿದೆ.