ಬೆಂಗಳೂರು, ಆ. 24 (DaijiworldNews/TA): ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸುತ್ತಿರುವ 'ಕಾಂತಾರ: ಚಾಪ್ಟರ್ 1' ಚಿತ್ರ ಬಿಡುಗಡೆಯಾಗುವ ಮುನ್ನವೇ ಹೊಸ ದಾಖಲೆ ನಿರ್ಮಿಸಿದೆ. ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಈ ಚಿತ್ರದ ವಿತರಣೆ ಹಕ್ಕಿಗೆ ಭಾರೀ ಬೇಡಿಕೆ ಉಂಟಾಗಿ, ಬರೋಬ್ಬರಿ 100 ಕೋಟಿಗೂ ಅಧಿಕ ಮೊತ್ತಕ್ಕೆ ಹಕ್ಕು ಮಾರಾಟವಾಗಿದೆ ಎಂಬುದು ಸಿನಿ ವಲಯದ ಬಿಸಿ ಸುದ್ದಿ.

ಇತ್ತೀಚಿನ ವರದಿಗಳ ಪ್ರಕಾರ, ತೆಲುಗು ಚಿತ್ರರಂಗದಲ್ಲಿಯೇ ಯಾವುದೇ ಹೈಪ್ ಇಲ್ಲದಿರುವ ಕನ್ನಡ ಮೂಲದ ಚಿತ್ರವೊಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಹಕ್ಕು ಮಾರಾಟವಾದುದು ಇದೇ ಮೊದಲು. 'ಕಾಂತಾರ: ಚಾಪ್ಟರ್ 1' ಸಿನಿಮಾ ತೆಲುಗು ರಾಜ್ಯಗಳ ಮೂವರು ಪ್ರಮುಖ ವಿತರಕರಿಗೆ ಹಂಚಲಾಗಿದೆ. ಕೋಸ್ಟಲ್ ಆಂಧ್ರದ ಹಕ್ಕು 45 ಕೋಟಿ, ಸೀಡೆಡ್ ವಿಭಾಗದ ಹಕ್ಕು 15 ಕೋಟಿ ಮತ್ತು ನಿಜಾಂ ಪ್ರದೇಶದ ಹಕ್ಕು 40 ಕೋಟಿಗೆ ಮಾರಾಟವಾಗಿದೆ.
ಈ ಮೂಲಕ ಈ ಸಿನಿಮಾ ನಿಜವಾದ ಅರ್ಥದಲ್ಲಿ ತೆಲುಗು ರಾಜ್ಯಗಳಲ್ಲಿ ಖರೀದಿ ಮಾಡಿದ ಅತ್ಯಂತ ದುಬಾರಿ ತೆಲುಗುಯೇತರ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶೇಷವೆಂದರೆ, ಜೂ. ಎನ್ಟಿಆರ್ ಮತ್ತು ಹೃತಿಕ್ ರೋಷನ್ ನಟಿಸುತ್ತಿರುವ 'ವಾರ್ 2' ಸಿನಿಮಾದ ಹಕ್ಕಿಗೂ ಇಷ್ಟು ಹಣ ನೀಡಲಾಗಿಲ್ಲ ಎಂಬುದು ಸುದ್ಧಿಯ ಮತ್ತೊಂದು ವಿಶೇಷ.
2022ರಲ್ಲಿ ಬಿಡುಗಡೆಯಾದ 'ಕಾಂತಾರ' ಮೊದಲ ಭಾಗವು ಕೂಡ ತೆಲುಗು ಆವೃತ್ತಿಯಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ತೆಲುಗು ಡಬ್ಬಿಂಗ್ನಲ್ಲೇ ಬಿಡುಗಡೆ ಆದ ಮೊದಲ ದಿನವೇ 5 ಕೋಟಿ ಗಳಿಸಿದ್ದ ಈ ಚಿತ್ರ, 40 ದಿನಗಳಲ್ಲಿ 60 ಕೋಟಿ ವ್ಯಾಪಾರ ಮಾಡಿತ್ತು. ಅಷ್ಟಾಗಿಯೂ ಹೆಚ್ಚು ಪ್ರಚಾರವಿಲ್ಲದ ಚಿತ್ರವು ಈ ಮಟ್ಟದ ಯಶಸ್ಸು ಗಳಿಸಿದ ಹಿನ್ನೆಲೆ, 'ಚಾಪ್ಟರ್ 1' ಮೇಲಿನ ನಿರೀಕ್ಷೆ ಮೂರು ಪಟ್ಟು ಹೆಚ್ಚಾಗಿದೆ.
ಪ್ರಸ್ತುತ, ಕೇವಲ ಆಂಧ್ರ ಮತ್ತು ತೆಲಂಗಾಣ ಭಾಗಗಳ ವಿತರಣೆ ಹಕ್ಕುಗಳನ್ನು ಮಾತ್ರ ಹೊಂಬಾಳೆ ಫಿಲ್ಮ್ಸ್ ಮಾರಾಟ ಮಾಡಿದ್ದು, ತಮಿಳುನಾಡು, ಕೇರಳ, ಹಿಂದಿ ಮತ್ತು ಅಂತಾರಾಷ್ಟ್ರೀಯ ಬಿಡುಗಡೆ ಹಕ್ಕುಗಳು ಇನ್ನೂ ಲಭ್ಯವಿವೆ. ಇವುಗಳೂ ಶೀಘ್ರವೇ ಭಾರಿ ಮೊತ್ತದಲ್ಲಿ ಮಾರಾಟವಾಗುವ ಸಾಧ್ಯತೆ ಇರುವುದಾಗಿ ಚಿತ್ರರಂಗದ ಅಂತರಂಗದಿಂದ ಮಾಹಿತಿ ಲಭ್ಯವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಈ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಈಗಾಗಲೇ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದು, ಬಿಡುಗಡೆಗೂ ಮುನ್ನವೇ ತನ್ನ ಜನಮನ್ನಣೆ ಗಳಿಸುತ್ತಿದೆ.