ಚೆನ್ನೈ, ಆ. 25 (DaijiworldNews/TA): ರಾಜಕೀಯ ಪ್ರವೇಶಕ್ಕೆ ಸಜ್ಜಾದ ವಿಜಯ್ ತಮ್ಮ ಕೊನೆಯ ಸಿನಿಮಾವನ್ನಾಗಿ ‘ಜನ ನಾಯಗನ್’ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಈ ಸಿನಿಮಾ ಚಿತ್ರೀಕರಣ ತೀವ್ರವಾಗಿ ನಡೆಯುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ, ವಿಜಯ್ ತಮ್ಮ ರಾಜಕೀಯ ಸ್ಫೂರ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ.

ಇತ್ತೀಚೆಗೆ ಮಧುರೈನಲ್ಲಿ ತಮ್ಮ ಹೊಸ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಮ್' ಸಮಾವೇಶವನ್ನು ಅದ್ಧೂರಿಯಾಗಿ ಆಯೋಜಿಸಿದ ವಿಜಯ್, ವೇದಿಕೆಯಿಂದ ಸಾರ್ವಜನಿಕರ ಕಡೆ ಸೆಲ್ಫಿ ವಿಡಿಯೋ ತೆಗೆದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕೇವಲ ಎರಡು ದಿನಗಳಲ್ಲಿ ಒಂದು ಕೋಟಿ ಲೈಕ್ಗಳನ್ನು ಗಳಿಸಿ, ಭಾರತದಲ್ಲಿ ಅತ್ಯಂತ ಹೆಚ್ಚು ಲೈಕ್ ಪಡೆದ ರಾಜಕೀಯ ಸಂಬಂಧಿತ ಸೆಲ್ಫಿ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಡಿಯೋ ಹಂಚಿದಾಗಲೇ ವಿಜಯ್ ಅವರ ಕಮೆಂಟ್ ಸೆಕ್ಷನ್ ಅನ್ನು ಅಕ್ಷರಶಃ ಬ್ಲಾಕ್ ಮಾಡಲಾಗಿತ್ತು – ಇದರಿಂದಾಗಿ ಅಭಿಮಾನಿಗಳ ಪ್ರತಿಕ್ರಿಯೆ ಲೈಕ್ಗಳ ಮೂಲಕವೇ ಹೊರಬರಬೇಕಾಯಿತು. ಅವರ ಅಭಿಮಾನಿಗಳು ಮಾತ್ರವಲ್ಲ, ರಾಜಕೀಯ ತಜ್ಞರೂ ಕೂಡ ಈ ವಿಡಿಯೋ ಮತ್ತು ಕಾರ್ಯಕ್ರಮದ ಜನಸಾಗರವನ್ನು ಗಮನಿಸಿದ್ದಾರೆ.
ಆದರೆ ವಿಜಯ್ ಅವರ ಈ ವಿಡಿಯೋದಲ್ಲಿ ಬೇರೊಂದು ಕುತೂಹಲಕಾರಿ ದೃಶ್ಯ ಕೂಡ ಕಂಡುಬಂದಿತ್ತು – ಅವರು ತಮ್ಮ ಹಣೆಗೆ ಹಾಗೂ ಕೊರಳಿಗೆ ಹೊದ್ದಿದ್ದ ಶಾಲು ಮತ್ತು ಪಟ್ಟಿಯ ಬಣ್ಣಗಳು ಕನ್ನಡದ ಧ್ವಜದ ಹಳದಿ-ಕೆಂಪು ಬಣ್ಣದಂತೆ ಕಾಣುತ್ತಿತ್ತು. ಇ ಅವರು ಧರಿಸಿದ್ದ ಶಾಲು ಅವರ ತಮ್ಮ ಪಕ್ಷದ ಧ್ವಜದ ಭಾಗವಾಗಿದೆ. ಟಿವಿಕೆ ಪಕ್ಷದ ಧ್ವಜದಲ್ಲೂ ಕೆಂಪು ಮತ್ತು ಹಳದಿ ಬಣ್ಣಗಳಿದ್ದು, ಅದು ಕನ್ನಡ ಧ್ವಜದ ಬಣ್ಣಗಳಂತೆಯೇ ಕಂಡರೂ, ಅದರ ಹಿನ್ನೆಲೆ ಹಾಗೂ ಅರ್ಥ ವಿಭಿನ್ನವಾಗಿದೆ.
ವಿಜಯ್ ರಾಜಕೀಯದತ್ತ ದೃಢ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅವರು ನಟಿಸುತ್ತಿರುವ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಮುನ್ನವೇ, ಇನ್ಸ್ಟಾಗ್ರಾಂನಲ್ಲಿ ಸೃಷ್ಟಿಸಿರುವ ಈ ದಾಖಲೆಗಳು ಅವರ ಸಾಮಾಜಿಕ ಪ್ರಭಾವ ಮತ್ತು ಅಭಿಮಾನಿಗಳ ಭಾರೀ ಬೆಂಬಲವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತವೆ.