ಚೆನ್ನೈ, ಆ. 31 (DaijiworldNews/AA): ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಒಂದು ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಇದೀಗ ಮತ್ತೊಂದು ಹಾರರ್ ಸಿನಿಮಾದಲ್ಲಿ ಬಣ್ಣ ಹಚ್ಚಲು ನಟಿ ರೆಡಿಯಾಗಿದ್ದಾರೆ.

ತಮಿಳಿನ ರಾಘವ್ ಲಾರೆನ್ಸ್ ಜೊತೆ ಹಾರರ್ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಸಜ್ಜಾಗಿದ್ದಾರೆ. ರಾಘವ್ ಅವರ ಜನಪ್ರಿಯ ಹಾರರ್ ಸಿನಿಮಾ ಸರಣಿಯಾದ 'ಕಾಂಚನಾ'ದ ಮುಂದಿನ ಭಾಗದಲ್ಲಿ ರಶ್ಮಿಕಾ ಸಹ ಕಾಣಿಸಿಕೊಳ್ಳಲಿದ್ದಾರೆ.
ಈ ಮೊದಲು 'ಕಾಂಚನಾ 4' ಸಿನಿಮಾನಲ್ಲಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಕೆಲ ವಾರಗಳ ಮುಂಚೆ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಪೂಜಾ ಹೆಗ್ಡೆ ಬದಲಿಗೆ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ರಾಘವ್ ಲಾರೆನ್ಸ್ ಎದುರು ದೆವ್ವದ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರಂತೆ. ಸಿನಿಮಾದ ಬಗ್ಗೆ ಮಾತುಕತೆ ಸಂಪೂರ್ಣವಾಗಿದ್ದು ಕೆಲವೇ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.
ಈ ಹಿಂದಿನ 'ಕಾಂಚನಾ' ಸಿನಿಮಾಗಳಲ್ಲಿ ರಾಘವ್ ಅವರೇ ದೆವ್ವದ ಪಾತ್ರದಲ್ಲಿ ನಟಿಸಿದ್ದರು. ಆದರೆ 'ಕಾಂಚನಾ 4' ಸಿನಿಮಾನಲ್ಲಿ ರಾಘವ್ ಜೊತೆಗೆ ರಶ್ಮಿಕಾ ಸಹ ದೆವ್ವವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ರಾಘವ್ ಲಾರೆನ್ಸ್ ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.