ತಿರುವನಂತಪುರಂ, ನ. 09 (DaijiworldNews/AA): ಸಾಮಾಜಿಕ ಜಾಲತಾಣದಲ್ಲಿ ನಟಿಯರಿಗೆ ಸಾಕಷ್ಟು ಕಿರುಕುಳ ಎದುರಾಗುತ್ತದೆ. ಇದೀಗ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಅವರ ಫೋಟೋವನ್ನು ಆಕ್ಷೇಪಾರ್ಹ ರೀತಿಯಲ್ಲಿ ಎಡಿಟ್ ಮಾಡಿ, ಸುಳ್ಳು ಮಾಹಿತಿ ಹಬ್ಬಿಸಿ ಕಿರುಕುಳ ನೀಡಲಾಗಿದೆ. ಈ ಕೃತ್ಯ ಎಸಗಿದ 20 ವರ್ಷದ ಯುವತಿಯ ವಿರುದ್ಧ ಸೈಬರ್ ಕ್ರೈಂ ಕೇಸ್ ದಾಖಲಾಗಿದೆ.

ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅನುಪಮಾ ಪರಮೇಶ್ವರ್ ಅವರು, "ಇತ್ತೀಚಿನ ದಿನಗಳಲ್ಲಿ ಒಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಆಕ್ಷೇಪಾರ್ಹ ಫೋಟೋ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿರುವುದು ತಿಳಿದುಬಂತು. ನನ್ನ ಪರಿಚಯದವರನ್ನು ಮತ್ತು ಕುಟುಂಬದವರನ್ನು ಟ್ಯಾಗ್ ಮಾಡಲಾಗುತ್ತಿತ್ತು. ಈ ರೀತಿ ಟಾರ್ಗೆಟ್ ಮಾಡಿ ಕಿರುಕುಳು ನೀಡಿದ್ದರಿಂದ ನನಗೆ ನಿಜಕ್ಕೂ ತೀವ್ರ ನೋವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಈ ಬಗ್ಗೆ ತನಿಖೆ ಮಾಡಿದಾಗ ಗೊತ್ತಾಗಿದ್ದು ಏನೆಂದರೆ, ನನ್ನ ಬಗ್ಗೆ ದ್ವೇಷ ಹರಡಲು ಮತ್ತು ನನ್ನ ಬಗ್ಗೆ ಕೆಟ್ಟ ಕಮೆಂಟ್ ಮಾಡಲು ಒಬ್ಬರೇ ವ್ಯಕ್ತಿ ಹಲವು ಫೇಕ್ ಅಕೌಂಟ್ ಮಾಡಿಕೊಂಡಿದ್ದಾರೆ. ಇದು ಗೊತ್ತಾದಾಗ ನಾನು ಕೇರಳ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ. ಈ ಕೃತ್ಯದ ಹಿಂದೆ ಇರುವ ವ್ಯಕ್ತಿ ಯಾರು ಎಂಬುದು ಪೊಲೀಸರ ಸಹಕಾರದಿಂದ ತಿಳಿಯಿತು" ಎಂದು ಪೋಸ್ಟ್ ಮಾಡಿದ್ದಾರೆ.
"ನನಗೆ ಆಶ್ಚರ್ಯ ಆಗಿದ್ದು ಏನೆಂದರೆ, ಈ ಕೃತ್ಯ ಮಾಡಿರುವುದು ತಮಿಳುನಾಡಿನ 20 ವರ್ಷದ ಹುಡುಗಿ! ಆಕೆಯ ವಯಸ್ಸನ್ನು ಗಮನದಲ್ಲಿ ಇಟ್ಟುಕೊಂಡು ಅವಳ ಗುರುತನ್ನು ನಾನು ಬಹಿರಂಗ ಮಾಡುತ್ತಿಲ್ಲ. ಯಾಕೆಂದರೆ, ಆಕೆಯ ಭವಿಷ್ಯ ಮತ್ತು ಮನಶಾಂತಿಗೆ ತೊಂದರೆ ಆಗಬಾರದು" ಎಂದು ತಿಳಿಸಿದ್ದಾರೆ.
"ಈ ಮೂಲಕ ಎಲ್ಲರಿಗೂ ನಾನು ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಮೊಬೈಲ್ ಫೋನ್ ಮತ್ತು ಸೋಶಿಯಲ್ ಮೀಡಿಯಾ ಇದೆ ಎಂದ ಮಾತ್ರಕ್ಕೆ ಬೇರೆಯವರ ಘನತೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ಆನ್ಲೈನ್ನಲ್ಲಿ ಮಾಡುವ ಎಲ್ಲ ಕೆಲಸಕ್ಕೂ ಹೆಜ್ಜೆ ಗುರುತು ಇರುತ್ತದೆ. ಎಲ್ಲದಕ್ಕೂ ಉತ್ತರ ಕೊಡಬೇಕಾಗಿಬರುತ್ತದೆ. ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಆಕೆ ಈ ಕೃತ್ಯದ ಪರಿಣಾಮ ಎದುರಿಸುತ್ತಾಳೆ" ಎಂದಿದ್ದಾರೆ.