ಮಂಗಳೂರು, ,ನ. 11 (DaijiworldNews/AK): ‘ಜೈ’ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ‘ಬಿಗ್ ಬಾಸ್’ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮುಖ್ಯ ಭೂಮಿಕೆಯಲ್ಲೂ ರೂಪೇಶ್ ಶೆಟ್ಟಿ ಅವರೇ ನಟಿಸಿದ್ದಾರೆ. ಈಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ಉಪೇಂದ್ರ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಮಧು ರಾವ್, ಉದ್ಯಮಿ ಪ್ರಕಾಶ್ ಕುಮ್ಕಳ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರೂಪೇಶ್ ಶೆಟ್ಟಿ ಹಾಗೂ ‘ಜೈ’ ಸಿನಿಮಾ ತಂಡಕ್ಕೆ ಎಲ್ಲರೂ ಶುಭಕೋರಿದರು. ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ, ಹುಲಿ ಕುಣಿತ ಕೂಡ ಗಮನ ಸೆಳೆಯಿತು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಆಗಮಿಸಿದ್ದರಿಂದ ಸ್ಟಾರ್ ಮೆರುಗು ಹೆಚ್ಚಿತ್ತು. ‘ಜೈ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ ಕೂಡ ಆಗಮಿಸಿದ್ದರು.
ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡಿ ಸಂತಸ ವ್ಯಕ್ತಪಡಿಸಿದರು. ‘ತುಳುನಲ್ಲಿ ಸಣ್ಣದಾಗಿ ಮಾಡಬೇಕೆಂದು ಶುರು ಮಾಡಿದ ಸಿನಿಮಾ ಇದು. ಈಗ ವಿದೇಶದಲ್ಲೂ ಪ್ರೀಮಿಯರ್ ಪ್ರದರ್ಶನ ಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ತುಳು ಸಿನಿಮಾ ಈಗ ಕನ್ನಡ ಹಾಗೂ ತುಳು ಸಿನಿಮಾವಾಗಿ ಬದಲಾಗಿದೆ. ಅದಕ್ಕೆ ಕಾರಣ ಸುನೀಲ್ ಶೆಟ್ಟಿ ಅಣ್ಣ’ ಎಂದರು ರೂಪೇಶ್ ಶೆಟ್ಟಿ.
‘ಸುನೀಲ್ ಶೆಟ್ಟಿ ಅವರಿಗೆ ನಾವು ಯಾರು ಅಂತಾನೆ ಗೊತ್ತಿರಲಿಲ್ಲ. ನಿರ್ಮಾಪಕರ ಕಡೆಯಿಂದ ಭೇಟಿಯಾಗಿ ಮನವಿ ಮಾಡಿಕೊಂಡೆವು. ಅವರ ಬೆಂಬಲ ಸಿಕ್ಕರೆ ನಮ್ಮ ಸಿನಿಮಾ ದೊಡ್ಡ ಮಟ್ಟಕ್ಕೆ ಹೋಗುತ್ತದೆ ಅಂತ ಕೇಳಿಕೊಂಡೆವು. ಅವರು ಒಪ್ಪಿಕೊಂಡರು. ಸಿನಿಮಾ ಮುಗಿಸಿ ಹೋಗಿ ಬಿಡಬಹುದಿತ್ತು. ಆದರೆ ಪ್ರಚಾರಕ್ಕೂ ನಮ್ಮ ಜೊತೆಗೆ ನಿಂತಿದ್ದಾರೆ’ ಎಂದು ರೂಪೇಶ್ ಶೆಟ್ಟಿ ಅವರು ಸುನೀಲ್ ಶೆಟ್ಟಿಗೆ ಧನ್ಯವಾದ ತಿಳಿಸಿದರು.