ಮುಂಬೈ, ನ. 23 (DaijiworldNews/AA): ಪಹಲ್ಗಾಮ್ ಭಯೋತ್ಪಾದಕ ದಾಳಿ, ದೆಹಲಿ ಸ್ಫೋಟದಲ್ಲಿ ಮೃತಪಟ್ಟವರಿಗೆ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಶ್ರದ್ಧಾಂಜಲಿ ಅರ್ಪಿಸಿದರು. ಜೊತೆಗೆ, ದೇಶ ಕಾಪಾಡುವ ಸೈನಿಕರು ಹಾಗೂ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಿದರು.

ಶನಿವಾರ ನಡೆದ ಗ್ಲೋಬಲ್ ಪೀಸ್ ಆನರ್ಸ್ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾರುಖ್ ಖಾನ್ ಅವರು, "26/11 ಭಯೋತ್ಪಾದಕ ದಾಳಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಇತ್ತೀಚಿನ ದೆಹಲಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಮುಗ್ಧ ಜನರಿಗೆ ನನ್ನ ವಿನಮ್ರ ಶ್ರದ್ಧಾಂಜಲಿ. ಈ ದಾಳಿಗಳಲ್ಲಿ ಹುತಾತ್ಮರಾದ ನಮ್ಮ ಧೈರ್ಯಶಾಲಿ ಭದ್ರತಾ ಸಿಬ್ಬಂದಿಗೆ ಗೌರವಯುತ ನಮನ" ಎಂದು ತಿಳಿಸಿದ್ದಾರೆ.
"ಮಾನವೀಯತೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು. ಭಾರತೀಯ ಸೈನಿಕರು ಮಾಡಿದ ತ್ಯಾಗಗಳನ್ನು ನಾವು ಗೌರವಿಸಬೇಕು. ನಾವೆಲ್ಲರೂ ಒಟ್ಟಾಗಿ ಶಾಂತಿಯತ್ತ ಹೆಜ್ಜೆ ಹಾಕೋಣ. ನಮ್ಮ ಸುತ್ತಲಿನ ಜಾತಿ, ಧರ್ಮ ಮತ್ತು ತಾರತಮ್ಯವನ್ನು ಮರೆತು ಮಾನವೀಯತೆಯ ಹಾದಿಯಲ್ಲಿ ನಡೆಯೋಣ. ಇದರಿಂದ ನಮ್ಮ ದೇಶದ ಶಾಂತಿಗಾಗಿ ನಮ್ಮ ವೀರರ ಹುತಾತ್ಮತೆ ವ್ಯರ್ಥವಾಗುವುದಿಲ್ಲ" ಎಂದು ಹೇಳಿದ್ದಾರೆ.
"ನಮ್ಮಲ್ಲಿ ಶಾಂತಿ ಇದ್ದರೆ, ಭಾರತವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಭಾರತವನ್ನು ಸೋಲಿಸಲು ಯಾರಿಗೂ ಸಾಧ್ಯವಾಗಲ್ಲ. ನಮ್ಮ ಭಾರತೀಯರ ಚೈತನ್ಯವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಾಗಲ್ಲ" ಎಂದಿದ್ದಾರೆ.