ಮುಂಬೈ, ನ. 24 (DaijiworldNews/AK): ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ನ ಹಿರಿಯ ನಟ, ಎವರ್ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇದೇ ಡಿಸೆಂಬರ್ 8ರಂದು ಅವರು 90ನೇ ವಸಂತಕ್ಕೆ ಕಾಲಿಡಬೇಕಿತ್ತು.

ಕಳೆದ ಕೆಲವು ತಿಂಗಳಿನಿಂದಲೂ ದೀರ್ಘ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು ಇಂದು ಮುಂಬೈನ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ, ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲು ಕುಟುಂಬ ನಿರ್ಧರಿಸಿತ್ತು. ಮುಂಬೈ ಸಮೀಪದ ಖಂಡಾಲಾದಲ್ಲಿರುವ ಫಾರ್ಮ್ ಹೌಸ್ನಲ್ಲಿ ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರೊಂದಿಗೆ ತಂದೆ ಧರ್ಮೇಂದ್ರ ಅವರು ವಾಸಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು.
ಧರ್ಮೇಂದ್ರ ಅವರ ಪತ್ನಿ ನಟಿ ಹೇಮಾ ಮಾಲಿನಿ, ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ನಟರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಸೇರಿದಂತೆ ಅವರ ಮಕ್ಕಳು ಮತ್ತು ಪುತ್ರಿಯರಾದ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರನ್ನು ಅಗಲಿದ್ದಾರೆ.
ಅವರು 1997 ರಲ್ಲಿ ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು, ಇದು ಉದ್ಯಮಕ್ಕೆ ಅವರ ಅಪಾರ ಕೊಡುಗೆಗೆ ಗೌರವವಾಗಿದೆ. 2012 ರಲ್ಲಿ, ಭಾರತ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿತು.
ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಹಾಗೂ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿ ಮರೆದಿದ್ದ ಧರ್ಮೇಂದ್ರ ಅವರು ದಶಕಗಳ ಕಾಲ ಸಿನಿಮಾ ರಂಗವನ್ನ ಆಳಿದ್ದರು ಎಂದರೆ ತಪ್ಪಾಗಲಾರದು. ಸಿನಿಮಾ ರಂಗಕ್ಕೆ ಇವರು ನೀಡಿರುವ ಕೊಡುಗೆ ಅಪಾರ, ಇದಕ್ಕೆ ಸಾಕ್ಷಿ ಎನ್ನುವಂತೆ ತನ್ನ ಸಿನಿರಂಗದ ಪ್ರಯಾಣದಲ್ಲಿ ಏನೆಲ್ಲಾ ಅಂದರೂ ಕೂಡ 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ʻಶೋಲೆʼ, ʻಚುಪ್ಕೆ ಚುಪ್ಕೆʼ, ʻಸೀತಾ ಔರ್ ಗೀತಾʼ ದಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಗೆ ಇವರದ್ದಾಗಿತ್ತು. ಶ್ರೀರಾಮ್ ರಾಘವನ್ ನಿರ್ದೇಶನದ ‘ಇಕ್ಕೀಸ್’ ಚಿತ್ರದಲ್ಲಿ ಧರ್ಮೇಂದ್ರ ಅವರು ಕೊನೆಯದಾಗಿ ನಟಿಸಿದ್ದರು. ಇದು ಡಿಸೆಂಬರ್ 25ರಂದು ತೆರೆ ಕಾಣಬೇಕಿದೆ.