ಬೆಂಗಳೂರು, ನ. 25 (DaijiworldNews/TA): ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಖ್ಯಾತಿ ಪಡೆದ ರಾಜ್ ಬಿ. ಶೆಟ್ಟಿ, ಈಗ ವಿತರಕರಾಗಿಯೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರ ಒಡೆತನದ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆ ಕನ್ನಡ ಸಿನಿಮಾಗಳ ನಿರ್ಮಾಣ ಮಾತ್ರವಲ್ಲದೆ, ಪರಭಾಷಾ ಸಿನಿಮಾಗಳ ವಿತರಣೆಯಲ್ಲೂ ತನ್ನದೇ ಸ್ಥಾನವನ್ನು ನಿರ್ಮಿಸಿಕೊಂಡಿದೆ.

ಇದಕ್ಕೂ ಮುನ್ನ ಮಲಯಾಳಂ ಭಾಷೆಯ ‘ಲೋಕಃ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿ ಉತ್ತಮ ಲಾಭ ಗಳಿಸಿದ್ದ ಲೈಟರ್ ಬುದ್ಧ ಫಿಲ್ಮ್ಸ್, ಇದೀಗ ಮತ್ತೊಂದು ಮಲಯಾಳಂ ಸಿನಿಮಾ ‘ಇಕೋ’ ವಿತರಣೆಯಲ್ಲೂ ಭರ್ಜರಿ ಪ್ರತಿಕ್ರಿಯೆ ಪಡೆದು ದಾಖಲೆ ಬರೆದಿದೆ. ನವೆಂಬರ್ 21ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಎರಡರಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ‘ಲೋಕಃ’ ಸಿನಿಮಾ ರೀತಿಯೇ ‘ಇಕೋ’ ಕೂಡ ವಾರಾಂತ್ಯದಲ್ಲಿ ಕರ್ನಾಟಕದ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ.
2025ನೇ ವರ್ಷ ಲೈಟರ್ ಬುದ್ಧ ಫಿಲ್ಮ್ಸ್ ತಂಡಕ್ಕೆ ವಿಶೇಷವಾಗಿದ್ದು, ಒಂದೇ ವರ್ಷದಲ್ಲಿ ಮೂರೂ ಯಶಸ್ವಿ ಸಿನಿಮಾಗಳನ್ನು ನೀಡುವ ಮೂಲಕ ಬ್ಯಾನರ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇದೇ ಸಂಸ್ಥೆ ನಿರ್ಮಿಸಿರುವ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿತ್ತು. ನಂತರ ವಿತರಣೆಯಾದ ‘ಲೋಕಃ’ ಸಿನಿಮಾ ಮತ್ತಷ್ಟು ಯಶಸ್ಸು ತಂದಿತು. ಈಗ ‘ಇಕೋ’ ಕೂಡ ಅದೇ ಹಾದಿಯನ್ನು ಅನುಸರಿಸುತ್ತಿದೆ.
ವಿಶಿಷ್ಟ ಕಥಾಹಂದರ ಇರುವ ಮಲಯಾಳಂ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ, ‘ಇಕೋ’ ಕೂಡ ಇದೇ ರೀತಿಯ ಅನುಭವವನ್ನು ನೀಡುತ್ತಿದೆ. ಬೆಂಗಳೂರಿನ ಅನೇಕ ಥಿಯೇಟರ್ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಚಿತ್ರದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಸಂದೀಪ್ ಪ್ರದೀಪ್, ವಿನೀತ್, ಸೌರಭ ಸಚ್ದೇವ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ದೊಡ್ಡ ಸ್ಟಾರ್ ಸಿನಿಮಾಗಳಿಗೂ ಪೈಪೋಟಿ ನೀಡುತ್ತಿರುವ ‘ಇಕೋ’ ಚಿತ್ರ, ತನ್ನ ತಾಂತ್ರಿಕ ಗುಣಮಟ್ಟ ಮತ್ತು ಕಲಾವಿದರ ಮಟ್ಟದ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಲೈಟರ್ ಬುದ್ಧ ಫಿಲ್ಮ್ಸ್ ಸಂಸ್ಥೆಗೆ ಇದು ಮತ್ತೊಂದು ಮಹತ್ವದ ಯಶಸ್ಸು.