ಮುಂಬೈ,ನ. 27 (DaijiworldNews/AK):ಹಿರಿಯ ನಟ ಧರ್ಮೇಂದ್ರ ಅವರ ನಿಧನದ ಮೂರು ದಿನಗಳ ನಂತರ, ಅವರ ಪತ್ನಿ ಮತ್ತು ಹಿರಿಯ ನಟಿ ಹೇಮಾ ಮಾಲಿನಿ ಅವರನ್ನು ನೆನಪಿಸಿಕೊಳ್ಳುವ ತಮ್ಮ ಮೊದಲ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಧರ್ಮೇಂದ್ರ ನವೆಂಬರ್ 24 ರಂದು ಮುಂಬೈನಲ್ಲಿ ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು. ನವೆಂಬರ್ 27 ರ ಗುರುವಾರ, ಹೇಮಾ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಗೌರವವನ್ನು ಪೋಸ್ಟ್ ಮಾಡಿ, ದಿವಂಗತ ನಟನನ್ನು " ಅವರು ನನಗೆ ಎಲ್ಲವೂ (ಸರ್ವಸ್ವ)" ಎಂದು ಕರೆದರು.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿರುವ ಹೇಮಾಮಾಲಿನಿ, ಅವರು ನನಗೆ ಪತಿಯಾಗಿ, ತಂದೆಯಾಗಿ, ಸ್ನೇಹಿತನಾಗಿ, ಮಾರ್ಗದರ್ಶಕರಾಗಿ, ಎರಡು ಹೆಣ್ಣುಮಕ್ಕಳಾದ ಈಶಾ ಮತ್ತು ಅಹಾನಾಗೆ ಪ್ರೀತಿಯ ತಂದೆಯಾಗಿ, ಎಲ್ಲ ಕೆಟ್ಟ ಹಾಗೂ ಒಳ್ಳೆಯ ಸಮಯದಲ್ಲಿ ನನ್ನ ಜೊತೆಗಿದ್ದು ಅನುಭವಿಸಿದ ಏಕೈಕ ವ್ಯಕ್ತಿ. ಅವರೇ ನನಗೆ ಎಲ್ಲವೂ ಆಗಿದ್ದರು ಎಂದು ಬರೆದುಕೊಂಡಿದ್ದಾರೆ.
ನನ್ನ ಕುಟುಂಬಸ್ಥರ ಜೊತೆಗೆ ಬೆರೆತು ಪ್ರೀತಿಯೊಂದಿಗೆ ಇರುತ್ತಿದ್ದರು ಹಾಗೂ ಅವರೆಲ್ಲರ ಮೇಲೆ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಇನ್ನೂ ಹೊರಗಿನ ಜಗತ್ತಿಗೆ ಅವರ ಪ್ರತಿಭೆ, ನಟನೆ ಹೊರತಾಗಿಯೂ ನಮ್ರತೆಯಿಂದಲೇ ಖ್ಯಾತಿಯಾದವರು. ಸಿನಿರಂಗದಲ್ಲಿ ಅವರ ನಿರಂತರ ಸಾಧನೆ ಹಾಗೂ ನಟನೆ ಶಾಶ್ವತವಾಗಿ ಉಳಿಯುವಂತದ್ದು. ಅವರನ್ನು ಕಳೆದುಕೊಂಡ ನನಗೆ ಇದೊಂದು ವೈಯಕ್ತಿಕ ನಷ್ಟ. ಈ ನೋವು ನಾನು ಭೂಮಿಯ ಮೇಲೆ ಇರುವ ತನಕವೂ ನನ್ನೊಂದಿಗಿರುತ್ತದೆ. ಇಷ್ಟು ವರ್ಷ ಅವರ ಜೊತೆಗಿದ್ದ ನನಗೆ ಸಾಕಷ್ಟು ಸಿಹಿ ಕ್ಷಣಗಳನ್ನು ಬಿಟ್ಟುಹೋಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.