ಮುಂಬೈ, ಡಿ. 02 (DaijiworldNews/AA): ಬಾಲಿವುಡ್ ನಟ ರಣವೀರ್ ಸಿಂಗ್ ಅವರು 'ಕಾಂತಾರ' ಚಿತ್ರವನ್ನು ಹಾಗೂ ರಿಷಬ್ ಶೆಟ್ಟಿಯನ್ನು ಹೊಗಳೋ ಭರದಲ್ಲಿ ವಿವಾದ ಒಂದನ್ನು ಮೃಮೇಲೆ ಎಳೆದುಕೊಂಡಿದ್ದಾರೆ. ಜೊತೆಗೆ ಇಲ್ಲಿನ ಸಂಸ್ಕೃತಿಗೆ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ಅನೇಕರು ಪೋಸ್ಟ್ಗಳನ್ನು ಮಾಡಿದ್ದರು. ಇದೀಗ ಈ ಬಗ್ಗೆ ರಣವೀರ್ ಸಿಂಗ್ ಕ್ಷಮೆ ಯಾಚಿಸಿ, ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಕ್ಷಮೆ ಕೇಳಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನಟ, "ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ಆ ದೃಶ್ಯವನ್ನು ಮಾಡಲು ಎಷ್ಟು ಶ್ರಮ ಬೇಕು ಎಂಬುದು ನನಗೆ ತಿಳಿದಿದೆ. ಹೀಗಾಗಿ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ" ಎಂದು ಬರೆದುಕೊಂಡಿದ್ದಾರೆ.
"ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರದ್ದಾದರೂ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.
ರಣವೀರ್ ಸಿಂಗ್ ಹಾಗೂ ರಿಷಬ್ ಶೆಟ್ಟಿ ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ಈ ವೇಳೆ ರಣವೀರ್ ಸಿಂಗ್ ಅವರು ರಿಷಬ್ ನಟನೆಯ ಕಾಂತಾರ ಚಿತ್ರವನ್ನು ಹೊಗಳಿದರು. 'ದೈವ' ಎನ್ನುವ ಬದಲು 'ದೆವ್ವ' ಎಂದರು. ಇಷ್ಟೇ ಅಲ್ಲ, ರಿಷಬ್ ಅವರು ದೈವವನ್ನು ಅನುಕರಿಸಿದಂತೆ ತಾವೂ ಅನುಕರಿಸಲು ಹೋದರು. ಇದು ಹಾಸ್ಯಾಸ್ಪದ ಎನಿಸಿದ್ದು, ಈ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದವು.