ಮುಂಬೈ, ಡಿ. 03 (DaijiworldNews/AK): ನಟಿ ರಶ್ಮಿಕಾ ಮಂದಣ್ಣಗೆ ಹಳೆಯ ಸಮಸ್ಯೆಯೊಂದು ಮತ್ತೆ ಎದುರಾಗಿದೆ. ಕೆಲ ವರ್ಷದ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಬಿಕಿನಿ ಧರಿಸಿದ ರಶ್ಮಿಕಾ ಮಂದಣ್ಣರ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಅನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಶೇರ್ ಮಾಡಿದ್ದರು. ಆದರೆ ಅದು ನಕಲಿ ವಿಡಿಯೋ ಆಗಿತ್ತು. ಇಂಥಹಾ ಮಾರ್ಫ್ಡ್ ವಿಡಿಯೋ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದರು. ಅದರಂತೆ ಒಬ್ಬ ವ್ಯಕ್ತಿಯ ಬಂಧನವೂ ಆಗಿತ್ತು.

ಇದೀಗ ಮತ್ತೊಮ್ಮೆ ಇದೇ ರೀತಿಯ ಸಮಸ್ಯೆ ರಶ್ಮಿಕಾಗೆ ಎದುರಾಗಿದೆ. ಎಐ ಬಳಸಿ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಬಾರಿಯೂ ಸಹ ರಶ್ಮಿಕಾರ, ಅಶ್ಲೀಲ ಎಂದೆನಿಸುವ ನಕಲಿ ವಿಡಿಯೋಗಳನ್ನು ಹರಿಬಿಡಲಾಗಿದೆ. ಇದು ಸಹಜವಾಗಿಯೇ ರಶ್ಮಿಕಾ ಮಂದಣ್ಣ, ಅವರ ಆಪ್ತರು ಮತ್ತು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಳೆದ ಬಾರಿ ಇದೇ ರೀತಿಯ ಘಟನೆ ನಡೆದಾಗ ರಶ್ಮಿಕಾ ಮಂದಣ್ಣ ಸಮಾಧಾನದಿಂದ ಪ್ರತಿಕ್ರಿಯೆ ನೀಡಿದ್ದರು. ಆದರೆ ಈ ಬಾರಿ ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ‘ಸತ್ಯವನ್ನು ನಿರೂಪಿಸಲು ಸಾಧ್ಯವಾಗದೇ ಇದ್ದಾಗ, ವಿವೇಚನೆಯೇ ನಮ್ಮ ದೊಡ್ಡ ರಕ್ಷಣೆಯಾಗುತ್ತದೆ. ಎಐ ಎಂಬುದು ಶಕ್ತಿಯುತ ಟೂಲ್ ಆಗಿದೆ, ಅದನ್ನು ಪ್ರಗತಿಗೆ ಬಳಸಬೇಕಿದೆ. ಆದರೆ ಮಹಿಳೆಯರನ್ನು ಗುರಿಯಾಗಿರಿಸಿ ಅಶ್ಲೀಲತೆಯನ್ನು ಸೃಷ್ಟಿಸಲು ಮತ್ತು ಅದರ ದುರುಪಯೋಗಕ್ಕೆ ಬಳಸುತ್ತಿರುವುದು, ಜನರಲಿ ಆಳವಾದ ನೈತಿಕ ಅವನತಿಯನ್ನು ಸೂಚಿಸುತ್ತದೆ. ನೆನಪಿಡಿ, ಇಂಟರ್ನೆಟ್ ಇನ್ನು ಮುಂದೆ ಸತ್ಯದ ಕನ್ನಡಿಯಲ್ಲ. ಅದು ಯಾವುದನ್ನಾದರೂ ಕಟ್ಟುಕಥೆ ಮಾಡಬಹುದಾದ ಕ್ಯಾನ್ವಾಸ್ ಆಗಿದೆ. ದುರುಪಯೋಗವನ್ನು ಮೀರಿ ನಾವು ಹೆಚ್ಚು ಘನತೆ ಮತ್ತು ಪ್ರಗತಿಪರ ಸಮಾಜವನ್ನು ನಿರ್ಮಿಸಲು ಎಐ ಅನ್ನು ಬಳಸೋಣ. ಅಜಾಗರೂಕತೆಯ ಬದಲು ಜವಾಬ್ದಾರಿಯನ್ನು ಆರಿಸಿಕೊಳ್ಳಿ. ಜನರು ಮನುಷ್ಯರಂತೆ ವರ್ತಿಸಲು ಸಾಧ್ಯವಾಗದಿದ್ದರೆ, ಅವರಿಗೆ ಕಠಿಣ ಮತ್ತು ಕ್ಷಮಿಸಲಾಗದ ಶಿಕ್ಷೆಯನ್ನು ನೀಡಬೇಕು’ ಎಂದು ರಶ್ಮಿಕಾ ಮಂದಣ್ಣ ಆಗ್ರಹಿಸಿದ್ದಾರೆ.