ಹೈದರಾಬಾದ್, ಡಿ. 15 (DaijiworldNews/TA): ನಂದಮೂರಿ ಬಾಲಕೃಷ್ಣ ಅಭಿನಯದ ಇತ್ತೀಚಿನ ಸಿನಿಮಾ ‘ಅಖಂಡ 2 ತಾಂಡವಂ’ ಬಿಡುಗಡೆಗೊಂಡು ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮೂಲಕ ಬ್ಲಾಕ್ಬಸ್ಟರ್ ಹಾದಿ ಹಿಡಿದಿದೆ. ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರ ಡಿಸೆಂಬರ್ 12ರಂದು ತೆರೆಗೆ ಬಂದಿದ್ದು, ಹಿಂದೂ ಧರ್ಮ, ದೇವರ ಮೇಲಿನ ಭಕ್ತಿ ಹಾಗೂ ಸನಾತನ ಧರ್ಮದ ವಿಚಾರಗಳನ್ನು ಪ್ರಭಾವಶಾಲಿಯಾಗಿ ಪ್ರದರ್ಶಿಸಿರುವುದರಿಂದ ದೊಡ್ಡ ವರ್ಗದ ಪ್ರೇಕ್ಷಕರನ್ನು ಸೆಳೆದಿದೆ. ಇದೇ ಹಿನ್ನೆಲೆಯಲ್ಲಿ ಇದೀಗ ಈ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

‘ಅಖಂಡ 2’ ಚಿತ್ರವನ್ನು ಅಭಿಮಾನಿಗಳಷ್ಟೇ ಅಲ್ಲದೆ ಸಾಮಾನ್ಯ ಪ್ರೇಕ್ಷಕರು ಹಾಗೂ ಮಕ್ಕಳು ಸಹ ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಕೃಷ್ಣ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲ ಮುರಳಿ ಕೃಷ್ಣ ಪಾತ್ರದ ಜೊತೆಗೆ ಅಖಂಡ ರುದ್ರ ಸಿಕಂದರ್ ಅಘೋರ ಎಂಬ ಮಾಸ್ ಅವತಾರದಲ್ಲಿ ಬಾಲಯ್ಯ ತಮ್ಮ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ವಿಶೇಷವಾಗಿ ಅಘೋರ ಪಾತ್ರದಲ್ಲಿ ಅವರ ನಟನಾ ಪ್ರದರ್ಶನ ಚಿತ್ರಕ್ಕೆ ಪ್ರಮುಖ ಆಕರ್ಷಣೆಯಾಗಿದೆ. ಇಡೀ ಕಥೆ ಈ ಪಾತ್ರದ ಸುತ್ತಲೇ ಸಾಗುತ್ತಿದ್ದು, ಸನಾತನ ಧರ್ಮದ ಕುರಿತು ಬಾಲಯ್ಯ ಹೇಳುವ ಸಂಭಾಷಣೆಗಳು ಹಾಗೂ ಖಳನಾಯಕರ ವಿರುದ್ಧ ಕೋಪಗೊಂಡು ಎದುರಿಸುವ ದೃಶ್ಯಗಳಿಗೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದಾರೆ.
ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಭಾನುವಾರ ಹೈದರಾಬಾದ್ನಲ್ಲಿ ‘ಅಖಂಡ 2’ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಾಯಕ ನಟ ಬಾಲಕೃಷ್ಣ, ನಿರ್ದೇಶಕ ಬೋಯಪಾಟಿ ಶ್ರೀನು ಸೇರಿದಂತೆ ಚಿತ್ರತಂಡದ ಎಲ್ಲ ಪ್ರಮುಖ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ನಿರ್ದೇಶಕ ಶ್ರೀನು, ಅಭಿಮಾನಿಗಳಿಗೆ ಖುಷಿ ನೀಡುವ ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದರು. ದೆಹಲಿಯಲ್ಲಿ ‘ಅಖಂಡ 2’ ವಿಶೇಷ ಶೋ ಆಯೋಜನೆ ಮಾಡುವ ಯೋಜನೆ ಇದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರು ಈಗಾಗಲೇ ಚಿತ್ರದ ಬಗ್ಗೆ ವಿಚಾರಿಸಿಕೊಂಡಿದ್ದು, ಶೀಘ್ರದಲ್ಲೇ ಅದನ್ನು ವೀಕ್ಷಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಬೋಯಪಾಟಿ ಶ್ರೀನು ತಿಳಿಸಿದರು. ಆದರೆ ಯಾವುದೇ ನಿರ್ದಿಷ್ಟ ದಿನಾಂಕವನ್ನು ಚಿತ್ರತಂಡ ಇನ್ನೂ ಘೋಷಿಸಿಲ್ಲ. ಪ್ರಧಾನಿ ಮೋದಿ ಅವರ ಶೆಡ್ಯೂಲ್ ನೋಡಿಕೊಂಡು ಶೋ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ತಂಡದ ಮೂಲಗಳು ತಿಳಿಸಿವೆ. ಈ ಸುದ್ದಿ ಹೊರಬಿದ್ದ ಕೂಡಲೇ ಬಾಲಕೃಷ್ಣ ಅಭಿಮಾನಿಗಳಲ್ಲಿ ಭಾರಿ ಉತ್ಸಾಹ ಮತ್ತು ಚರ್ಚೆ ಶುರುವಾಗಿದೆ.
ಬಾಕ್ಸ್ ಆಫೀಸ್ ವಿಷಯಕ್ಕೆ ಬಂದರೆ, ‘ಅಖಂಡ 2’ ಕೇವಲ ಮೂರು ದಿನಗಳಲ್ಲಿ 61 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿತ್ರಕ್ಕೆ ಆರಂಭದಲ್ಲಿ ವಿಮರ್ಶಕರಿಂದ ಕೆಲವು ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾದರೂ, ಜನಸಾಮಾನ್ಯರ ಬೆಂಬಲದಿಂದ ಕಲೆಕ್ಷನ್ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಮೂಲಕ ನಿರ್ಮಾಪಕರು ದೊಡ್ಡ ಲಾಭ ಕಾಣುವ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ, ಮಿಶ್ರ ವಿಮರ್ಶೆಗಳ ನಡುವೆಯೂ ‘ಅಖಂಡ 2 ತಾಂಡವಂ’ ಸನಾತನ ಧರ್ಮದ ವಿಷಯ, ಮಾಸ್ ಅಂಶಗಳು ಮತ್ತು ಬಾಲಕೃಷ್ಣ ಅವರ ಪವರ್ಫುಲ್ ಅಭಿನಯದಿಂದ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ.