ಮುಂಬೈ, ಡಿ. 21 (DaijiworldNews/AA): ನನ್ನ ಕಣ್ಣೆದುರೇ ಸಾವು ಬಂದು ಹೋದಂತಾಯಿತು. ನಾನು ಬದುಕಿರುವುದೇ ಅದೃಷ್ಟ. ಆದರೆ ಈ ಆಘಾತದಿಂದ ಹೊರಬರಲು ನನಗೆ ಸ್ವಲ್ಪ ಸಮಯಬೇಕು ಎಂದು ಅಪಘಾತದ ಬಳಿಕ ನಟಿ ಮತ್ತು ಡ್ಯಾನ್ಸರ್ ನೋರಾ ಫತೇಹಿ ಮೊದಲ ಅನುಭವ ಹಂಚಿಕೊಂಡಿದ್ದಾರೆ.

ನೋರಾ ಫತೇಹಿ ಅವರು ಡೇವಿಡ್ ಗುಟ್ಟಾ ಅವರ ಸಂಗೀತ ಕಚೇರಿ ಸನ್ಬರ್ನ್ ಉತ್ಸವದಲ್ಲಿ ಭಾಗಿಯಾಗಲು ತೆರಳುತ್ತಿದ್ದಾಗ ರಸ್ತೆ ಅಪಘಾತಕ್ಕೀಡಾಗಿದ್ದರು. ಇದೀಗ ಆಸ್ಪತ್ರೆಯಲ್ಲಿರುವ ನಟಿ ನೋರಾ ಆತಂಕ ವ್ಯಕ್ತಪಡಿಸಿದ್ದು, 'ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ, ಆದರೆ ಆ ಕ್ಷಣ ಅತ್ಯಂತ ಭಯಾನಕವಾಗಿತ್ತು. ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ನಮ್ಮ ಕಾರಿಗೆ ಡಿಕ್ಕಿ ಹೊಡೆದಾಗ ನಾನು ಕಾರಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಬಿದ್ದಿದ್ದೆ. ಕಿಟಕಿಗೆ ನನ್ನ ತಲೆ ಚಚ್ಚಿಕೊಂಡಿತ್ತು. ಆ ಕ್ಷಣದಲ್ಲಿ ನನ್ನ ಕಣ್ಣೆದುರೇ ಸಾವು ಬಂದು ಹೋದಂತಾಯಿತು' ಎಂದು ತಿಳಿಸಿದ್ದಾರೆ.
ಸನ್ಬರ್ನ್ ಫೆಸ್ಟಿವಲ್ಗೆ ತೆರಳುತ್ತಿದ್ದ ದಾರಿಯಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿತ್ತು. ಕುಡಿದ ಮತ್ತಿನಲ್ಲಿದ್ದ ಚಾಲಕನೊಬ್ಬ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರಿನ ಒಳಗಿದ್ದ ನೋರಾ ಅವರು ಕಿಟಕಿಗೆ ಹೋಗಿ ಬಡಿದಿದ್ದಾರೆ. ಘಟನೆಯ ನಂತರ ಅವರನ್ನ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಈಗಾಗಲೇ ಮುಂಬೈ ಪೊಲೀಸರು ಆರೋಪಿ ಚಾಲಕನನ್ನ ಬಂಧಿಸಿದ್ದಾರೆ. ಆತನ ವಿರುದ್ಧ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಮತ್ತು ಅತಿ ವೇಗವಾಗಿ ವಾಹನ ಚಲಾಯಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.