ಮುಂಬೈ, ಜ. 09 (DaijiworldNews/TA): ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತರುವ ಮತ್ತೊಂದು ಮಹತ್ವದ ಸಾಧನೆಯನ್ನು ಹೊಂಬಾಳೆ ಫಿಲ್ಮ್ಸ್ ತನ್ನದಾಗಿಸಿಕೊಂಡಿದೆ. 2025ರ ಸಾಲಿನ ಆಸ್ಕರ್ ಪ್ರಶಸ್ತಿಗಳಲ್ಲಿ ವಿಶ್ವದ ಅತ್ಯಂತ ಪ್ರತಿಷ್ಠಿತ ವಿಭಾಗವಾದ ‘ಅತ್ಯುತ್ತಮ ಚಿತ್ರ’ ವಿಭಾಗದ ಸಾಮಾನ್ಯ ಪ್ರವೇಶ ಪಟ್ಟಿಯಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ: ಚಾಪ್ಟರ್ 1’ಮತ್ತು ‘ಮಹಾವತಾರ ನರಸಿಂಹ’ ಚಿತ್ರಗಳು ಅಧಿಕೃತವಾಗಿ ಸ್ಥಾನ ಪಡೆದಿವೆ. ಇದು ಭಾರತೀಯ ಚಿತ್ರರಂಗ, ವಿಶೇಷವಾಗಿ ಕನ್ನಡ ಚಿತ್ರೋದ್ಯಮಕ್ಕೆ ಐತಿಹಾಸಿಕ ಕ್ಷಣವಾಗಿದೆ.

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ತನ್ನ ಆಳವಾದ ಸಾಂಸ್ಕೃತಿಕ, ಜನಪದ ಪರಂಪರೆ ಮತ್ತು ವಿಶಿಷ್ಟ ಕಥನ ಶೈಲಿಯ ಮೂಲಕ ದೇಶದ ಗಡಿಮೀರಿ ಜಾಗತಿಕ ಪ್ರೇಕ್ಷಕರ ಮನಗೆದ್ದಿದೆ. ಸ್ಥಳೀಯ ಕಥೆಯನ್ನು ವಿಶ್ವಮಟ್ಟದ ಭಾಷೆಯಲ್ಲಿ ಹೇಳುವ ಪ್ರಯತ್ನವೇ ಈ ಚಿತ್ರದ ದೊಡ್ಡ ಶಕ್ತಿ ಎಂದು ವಿಮರ್ಶಕರು ಗುರುತಿಸಿದ್ದಾರೆ. ಇದೇ ಕಾರಣಕ್ಕೆ ಈ ಚಿತ್ರ ಆಸ್ಕರ್ನ ಅತ್ಯಂತ ಪ್ರತಿಷ್ಠಿತ ವಿಭಾಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ.
ಇನ್ನೊಂದೆಡೆ ಅಶ್ವಿನ್ ಕುಮಾರ್ ನಿರ್ದೇಶನದ ‘ಮಹಾವತಾರ ನರಸಿಂಹ’ ಭಾರತೀಯ ಅನಿಮೇಷನ್ ಲೋಕದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದೆ. ಈ ಚಿತ್ರ ‘ಅತ್ಯುತ್ತಮ ಚಿತ್ರ’ ವಿಭಾಗದ ಜೊತೆಗೆ ‘ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್’ ವಿಭಾಗದಲ್ಲೂ ಸಾಮಾನ್ಯ ಪ್ರವೇಶ ಪಟ್ಟಿಗೆ ಆಯ್ಕೆಯಾಗಿದ್ದು, ಈ ವಿಭಾಗದಲ್ಲಿ ಆಸ್ಕರ್ ಸ್ಪರ್ಧೆಗೆ ಅರ್ಹತೆ ಪಡೆದ ಭಾರತದ ಮೊದಲ ಅನಿಮೇಷನ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೃಶ್ಯ ವೈಭವ, ತಂತ್ರಜ್ಞಾನ ಹಾಗೂ ಭಾರತೀಯ ಪೌರಾಣಿಕ ಕಥನವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತರುವ ಪ್ರಯತ್ನವೇ ಈ ಸಾಧನೆಯ ಹಿಂದೆ ಇದೆ.
ಈ ವರ್ಷದ ಆಸ್ಕರ್ ಸಾಮಾನ್ಯ ಪ್ರವೇಶ ಪಟ್ಟಿಯಲ್ಲಿ ಭಾರತದಿಂದ ಆಯ್ಕೆಯಾದ ಕೇವಲ ಐದು ಚಿತ್ರಗಳ ಪೈಕಿ ಎರಡು ಚಿತ್ರಗಳು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯದ್ದಾಗಿರುವುದು ವಿಶೇಷ ಗಮನಸೆಳೆಯುವ ಸಂಗತಿಯಾಗಿದೆ. ಇದು ವಿಜಯ್ ಕಿರಗಂದೂರು ಅವರ ನೇತೃತ್ವದ ಹೊಂಬಾಳೆ ಫಿಲ್ಮ್ಸ್ ಭಾರತೀಯ ಕಥೆಗಳನ್ನು ಜಾಗತಿಕ ವೇದಿಕೆಗೆ ಉನ್ನತ ಗುಣಮಟ್ಟದೊಂದಿಗೆ ಕೊಂಡೊಯ್ಯುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಕಾಂತಾರ: ಚಾಪ್ಟರ್ 1 ಮತ್ತು ಮಹಾವತಾರ ನರಸಿಂಹ ಚಿತ್ರಗಳು ಕೇವಲ ಅತ್ಯುತ್ತಮ ಚಿತ್ರ ವಿಭಾಗದಲ್ಲಷ್ಟೇ ಅಲ್ಲದೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಛಾಯಾಗ್ರಹಣ ಹಾಗೂ ಚಿತ್ರಕಥೆ ಸೇರಿದಂತೆ ಇತರೆ ಪ್ರಮುಖ ವಿಭಾಗಗಳಲ್ಲೂ ಸ್ಪರ್ಧೆಗೆ ಇಳಿಯಲಿವೆ. ಈ ಮೂಲಕ ಭಾರತೀಯ ಸಿನಿಮಾಗಳ ಸೃಜನಶೀಲತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ವಿಶ್ವಕ್ಕೆ ಮತ್ತೊಮ್ಮೆ ಪರಿಚಯಿಸುವ ಅವಕಾಶ ಸಿಕ್ಕಿದೆ.
ಈ ವರ್ಷ ಆಸ್ಕರ್ ಸಾಮಾನ್ಯ ಪ್ರವೇಶ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಚಿತ್ರಗಳಲ್ಲಿ ‘ಕಾಂತಾರ: ಎ ಲೆಜೆಂಡ್ – ಅಧ್ಯಾಯ 1’, ‘ಮಹಾವತಾರ ನರಸಿಂಹ’, ‘ತನ್ವಿ ದಿ ಗ್ರೇಟ್’, ‘ಸಿಸ್ಟರ್ ಮಿಡ್ನೈಟ್’ ಹಾಗೂ ‘ಪ್ರವಾಸಿ ಕುಟುಂಬ’ ಸೇರಿವೆ.
ಒಟ್ಟಾರೆ, ಹೊಂಬಾಳೆ ಫಿಲ್ಮ್ಸ್ ಸಾಧನೆ ಭಾರತೀಯ ಚಿತ್ರರಂಗದ ಬೆಳವಣಿಗೆಗೆ ಹೊಸ ದಿಕ್ಕು ನೀಡಿದ್ದು, ಕನ್ನಡ ಸೇರಿದಂತೆ ಭಾರತೀಯ ಕಥೆಗಳು ಜಾಗತಿಕ ವೇದಿಕೆಯಲ್ಲಿ ಎಷ್ಟು ಶಕ್ತಿಶಾಲಿಯಾಗಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.