ತಿರುವನಂತಪುರಂ, ಜ. 31 (DaijiworldNews/AA): ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜಯರಾಮ್ ಅವರನ್ನು ವಿಚಾರಣೆ ನಡೆಸಲಾಗಿದೆ.

ನಟ ಜಯರಾಮ್ ಅವರು ಕನ್ನಡ, ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅವರು ಶಬರಿಮಲೆಯ ಪ್ರಕರಣದ ಪ್ರಮುಖ ಆರೋಪಿಯೊಂದಿಗೆ ಲಿಂಕ್ ಹೊಂದಿರುವ ಅನುಮಾನದ ಮೇರೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಅವರನ್ನು ವಿಚಾರಣೆ ನಡೆಸಿದೆ.
2019ರಲ್ಲಿ ಶಬರಿಮಲೆಯ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಸಂದರ್ಭದಲ್ಲಿ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಉನ್ನಿಕೃಷ್ಣನ್ ಪೊಟ್ಟಿ ಪ್ರಮುಖ ಆರೋಪಿಯಾಗಿದ್ದಾನೆ. ಆತನ ಜೊತೆ ಜಯರಾಮ್ ಒಡನಾಟ ಹೊಂದಿರುವುದರಿಂದ ವಿಚಾರಣೆ ಎದುರಿಸಬೇಕಾಗಿದೆ. ವಿಚಾರಣೆ ವೇಳೆ ಪರಿಚಯ ಹಾಗೂ ಭೇಟಿ ಬಗ್ಗೆ ಪ್ರಶ್ನಿಸಲಾಗಿದೆ.
ಉನ್ನಿಕೃಷ್ಣನ್ 2019ರಲ್ಲಿ ಚೆನ್ನೈನಲ್ಲಿ ಪೂಜೆ ಆಯೋಜನೆ ಮಾಡಿದ್ದ. ಈ ಪೂಜೆಯಲ್ಲಿ ಜಯರಾಮ್ ಕೂಡ ಭಾಗವಹಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.