ಮಂಗಳೂರು, ಫೆ. 03 (DaijiworldNews/TA): ಜಯಕಿರಣ ಫಿಲಂಸ್ ಲಾಂಛನದಲ್ಲಿ, ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ತುಳು ಸಿನಿಮಾ ‘ನಾನ್ವೆಜ್’ ಫೆಬ್ರವರಿ 6ರಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್ಗಳಲ್ಲಿ ಕೇವಲ 99 ರೂಪಾಯಿ ಟಿಕೆಟ್ ದರದಲ್ಲಿ ವೀಕ್ಷಿಸಬಹುದಾಗಿದೆ.



ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, “ದುಬಾರಿ ಟಿಕೆಟ್ ಕಾರಣದಿಂದ ಉತ್ತಮ ಸಿನಿಮಾಗಳನ್ನು ನೋಡಲು ಸಾಧ್ಯವಾಗದವರು ಈ ಚಿತ್ರವನ್ನು ಮಿಸ್ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದಲೇ 99 ರೂ. ದರ ನಿಗದಿಪಡಿಸಲಾಗಿದೆ. ಇದು ತುಳು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ” ಎಂದು ತಿಳಿಸಿದರು. ಸಿಂಗಲ್ ಥಿಯೇಟರ್ಗಿಂತಲೂ ಕಡಿಮೆ ದರದಲ್ಲಿ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡುವ ಅಪರೂಪದ ಅವಕಾಶ ಇದಾಗಿದೆ ಎಂದರು.
‘ನಾನ್ವೆಜ್’ ಚಿತ್ರವು ಸಂಪೂರ್ಣವಾಗಿ ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧಗೊಂಡಿದ್ದು, ವಿಭಿನ್ನ ಹಾಗೂ ಕುತೂಹಲಕಾರಿ ಕಥಾವಸ್ತುವನ್ನು ಹೊಂದಿದೆ. ‘ಸು ಫ್ರಂ ಸೋ’ ಸಿನಿಮಾದ ಹಲವು ಕಲಾವಿದರು ಈ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ತೂಮಿನಾಡು, ಪುಷ್ಪರಾಜ್ ಬೊಳ್ಳೂರು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ನಟಿಸಿದ್ದಾರೆ. ನಾಯಕಿಯಾಗಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ಅಭಿನಯಿಸಿದ್ದಾರೆ. ಜೊತೆಗೆ ನವೀನ್ ಡಿ. ಪಡೀಲ್ ಹಾಗೂ ಭರವಸೆಯ ಯುವ ನಟ ಅಥರ್ವ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಸೂರಜ್ ಶೆಟ್ಟಿ ಮಾತನಾಡಿ, “ಚಿತ್ರದಲ್ಲಿ ಹಾಸ್ಯ, ಮನೋರಂಜನೆ ಮತ್ತು ಸಂದೇಶಕ್ಕೆ ಯಾವುದೇ ಕೊರತೆಯಿಲ್ಲ. ಪ್ರೀತಿಯ ಹಿಂದೆ ಹೋಗುವ ಮುಗ್ಧ ಯುವಕನ ಸುತ್ತ ಹೆಣೆದಿರುವ ಕಥೆ ಇದಾಗಿದೆ. ಮಕ್ಕಳು ಮತ್ತು ಪೋಷಕರು ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ಇದು. ಹಾಸ್ಯದ ಮೂಲಕಲೇ ಸಂಪೂರ್ಣ ಕಥೆಯನ್ನು ಕೊಂಡೊಯ್ಯಲಾಗಿದೆ” ಎಂದು ಹೇಳಿದರು.
ನಾಯಕ ನಟ ಅಥರ್ವ ಪ್ರಕಾಶ್, “ಟೀಸರ್ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಒಂದು ಸೂಕ್ಷ್ಮ ವಿಷಯವನ್ನು ಎಷ್ಟು ಹಾಸ್ಯಮಯವಾಗಿ ಹೇಳಬಹುದು ಎಂಬುದನ್ನು ಸಿನಿಮಾ ತೋರಿಸುತ್ತದೆ. ಪ್ರಮುಖ ಟ್ವಿಸ್ಟ್ಗಳೊಂದಿಗೆ ಚಿತ್ರ ಸಂಪೂರ್ಣ ಮನೋರಂಜನೆ ನೀಡಲಿದೆ” ಎಂದರು.
ಈ ಸಿನಿಮಾ ಮಗುವಿನ ಸಹಜ ಕುತೂಹಲ, ಅದಕ್ಕೆ ಸಮಾಜ ನೀಡುವ ಪ್ರತಿಕ್ರಿಯೆ ಮತ್ತು ಉತ್ತರ ಹುಡುಕುವ ಪ್ರಯತ್ನದ ಸುತ್ತ ಕಥೆಯನ್ನು ಕಟ್ಟಿಕೊಂಡಿದೆ. ‘ನಾನ್ವೆಜ್’ ಎಂಬ ಶಬ್ದದಲ್ಲೇ ಗೂಢಾರ್ಥವಿದ್ದು, ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಉಳಿಸಿಕೊಂಡು ಸಾಗುತ್ತದೆ.
ತುಳು ಸಿನಿಮಾರಂಗದಲ್ಲಿ ಹೊಸತನದ ಕೊರತೆ ಎಂಬ ಮಾತಿಗೆ ನೇರ ಉತ್ತರ ನೀಡುವ ಪ್ರಯತ್ನವಾಗಿ ‘ನಾನ್ವೆಜ್’ ಸಿನಿಮಾ ಹೊರಬರುತ್ತಿದ್ದು, ಕೇವಲ 99 ರೂಪಾಯಿಗೆ ಮಲ್ಟಿಪ್ಲೆಕ್ಸ್ನಲ್ಲಿ ಕುಟುಂಬ ಸಮೇತರಾಗಿ ನೋಡಬಹುದಾದ ಭರ್ಜರಿ ಮನೋರಂಜನೆಯಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕೆ ಇದೆ.