ಮುಂಬೈ, ಫೆ. 03 (DaijiworldNews/TA): ಆಯಿಲ್ ರಿಫೈನರಿಯಿಂದ ಹಿಡಿದು ಮಾವಿನ ಹಣ್ಣು ಮಾರಾಟದವರೆಗೆ ನಾನಾ ಕ್ಷೇತ್ರಗಳಲ್ಲಿ ಉದ್ಯಮ ವಿಸ್ತರಿಸಿರುವ ರಿಲಯನ್ಸ್, ಮನರಂಜನಾ ಕ್ಷೇತ್ರದಲ್ಲೂ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ. ಖುದ್ದು ಸಿನಿಮಾ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ವಿತರಣಾ ವ್ಯವಸ್ಥೆ, ಜಿಯೋ ಹೆಸರಿನ ಒಟಿಟಿ ಹಾಗೂ ಟಿವಿ ನೆಟ್ವರ್ಕ್ಗಳ ಮೂಲಕ ಈಗಾಗಲೇ ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ರಿಲಯನ್ಸ್, ಇದೀಗ ಮತ್ತೊಂದು ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದೆ.

ಆಸ್ಕರ್ ಪ್ರಶಸ್ತಿ ಗೆದ್ದಿರುವ ಖ್ಯಾತ ಸಿಖ್ಯ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಯ 50.1 ಶೇಕಡಾ ಷೇರುಗಳನ್ನು ರಿಲಯನ್ಸ್ ಜಿಯೋ ಸ್ಟುಡಿಯೋ ಖರೀದಿಸಿದ್ದು, ಇದರೊಂದಿಗೆ ಸಂಸ್ಥೆಯ ಮುಖ್ಯ ಪಾಲುದಾರ ಮತ್ತು ಮಾಲೀಕರಾಗಿದ್ದಾರೆ. ಭಾರತೀಯ ಕಥೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸುವ ಉದ್ದೇಶದಿಂದ ಈ ಪಾಲುದಾರಿಕೆ ನಡೆದಿದೆ ಎಂದು ರಿಲಯನ್ಸ್ ಜಿಯೋ ಸ್ಟುಡಿಯೋ ತಿಳಿಸಿದೆ.
ಗುಣೀತ್ ಮೋಂಗಾ ಕಪೂರ್ ಹಾಗೂ ಅಚಿನ್ ಜೈನ್ ಅವರು ಸ್ಥಾಪಿಸಿದ ಸಿಖ್ಯ ಎಂಟರ್ಟೈನ್ಮೆಂಟ್, ಕಳೆದ ದಶಕದಲ್ಲಿ ಭಾರತೀಯ ಕಥೆಗಳ ಶಕ್ತಿಯನ್ನು ಜಾಗತಿಕ ವೇದಿಕೆಯಲ್ಲಿ ಯಶಸ್ವಿಯಾಗಿ ತೋರಿಸಿದೆ. ಆಸ್ಕರ್ ಪ್ರಶಸ್ತಿ ಸೇರಿದಂತೆ ಅನೇಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಸಿಖ್ಯ ಹೊಂದಿದೆ.
ವಿಶೇಷವೆಂದರೆ, ಸಿಖ್ಯ ಎಂಟರ್ಟೈನ್ಮೆಂಟ್ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆ. 2018ರಲ್ಲಿ ‘ಪೀರಿಯಡ್: ಎಂಡ್ ಆಫ್ ಸೆಂಟೆನ್ಸ್’ ಡಾಕ್ಯುಮೆಂಟರಿ ಶಾರ್ಟ್ಗೆ ಹಾಗೂ 2022ರಲ್ಲಿ ‘ದಿ ಎಲಿಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಈ ಎರಡೂ ಡಾಕ್ಯುಮೆಂಟರಿಗಳನ್ನು ಸಿಖ್ಯ ನಿರ್ಮಾಣ ಮಾಡಿದೆ.
ಡಾಕ್ಯುಮೆಂಟರಿಗಳಷ್ಟೇ ಅಲ್ಲದೆ, ಹೊಸಬರಿಗೆ ಅವಕಾಶ ನೀಡಿ ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ವಿಭಿನ್ನ ಶೈಲಿಯ ಸಿನಿಮಾಗಳಿಗೂ ಸಿಖ್ಯ ಪ್ರಸಿದ್ಧ. ‘ದಿ ಲಂಚ್ಬಾಕ್ಸ್’, ‘ಗರ್ಲ್ ಇನ್ ಯೆಲ್ಲೊ ಬೂಟ್ಸ್’, ‘ಮಸಾನ್’, ‘ಸೂರರೈ ಪೋಟ್ರು’, ‘ಕಠಲ್’ ಸೇರಿದಂತೆ ಹಲವು ಪ್ರಶಂಸಿತ ಚಿತ್ರಗಳನ್ನು ಸಂಸ್ಥೆ ನಿರ್ಮಾಣ ಮಾಡಿದೆ. ಈ ಸ್ವಾಧೀನದ ಮೂಲಕ ರಿಲಯನ್ಸ್ ಜಿಯೋ ಸ್ಟುಡಿಯೋ ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಭಾರತೀಯ ಕಥೆಗಳನ್ನು ಹೇಳುವ ತನ್ನ ಗುರಿಯನ್ನು ಇನ್ನಷ್ಟು ಬಲಪಡಿಸಿದೆ ಎಂದು ಹೇಳಲಾಗುತ್ತಿದೆ.