ಹೈದರಾಬಾದ್,ಫೆ. 24 (DaijiworldNews/TA): ದಕ್ಷಿಣ ಭಾರತೀಯ ಸಿನಿರಂಗದ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಸಿನಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಕಳೆದ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಇದೀಗ ತಮ್ಮ ಸಂಬಂಧಕ್ಕೆ ಮದುವೆಯ ಮೊಹರು ಒತ್ತಲು ಸಜ್ಜಾಗಿದೆ. ಫೆಬ್ರವರಿ 26ರಂದು ಇವರ ವಿವಾಹ ಸಮಾರಂಭ ನಡೆಯಲಿದೆ.

ಉದಯಪುರದ ಐಷಾರಾಮಿ ರೆಸಾರ್ಟ್ನಲ್ಲಿ ಮದುವೆ : ರಾಜಸ್ಥಾನದ ಉದಯಪುರ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಅರಾವಳಿ ಬೆಟ್ಟಗಳ ಮಧ್ಯದ ಖಾಸಗಿ ಐಶಾರಾಮಿ ರೆಸಾರ್ಟ್ನಲ್ಲಿ ಮದುವೆ ನಡೆಯುತ್ತಿದೆ. 117 ಖಾಸಗಿ ವಿಲ್ಲಾಗಳು, ನದಿ-ಕೊಳ ಹಾಗೂ ಖಾಸಗಿ ಹೆಲಿಪ್ಯಾಡ್ ಸೌಲಭ್ಯ ಹೊಂದಿರುವ ಈ ರೆಸಾರ್ಟ್ನಲ್ಲಿ ಈಗಾಗಲೇ ಮದುವೆ ಸಿದ್ಧತೆಗಳು ಆರಂಭಗೊಂಡಿವೆ. ಕೆಲ ದಿನಗಳ ಹಿಂದೆಯೇ ಜೋಡಿ ಹಾಗೂ ಅವರ ಕುಟುಂಬದವರು ಸ್ಥಳಕ್ಕೆ ತಲುಪಿದ್ದಾರೆ.
ಉತ್ತರ–ದಕ್ಷಿಣ ಸಂಪ್ರದಾಯಗಳ ಮಿಲನ: ವಿಜಯ್ ಮತ್ತು ರಶ್ಮಿಕಾ ಮದುವೆ ಹಲವು ಸಂಸ್ಕೃತಿಗಳ ಸಂಯೋಜನೆಯಾಗಿ ನಡೆಯಲಿದೆ. ಉತ್ತರ ಭಾರತದ ಸಂಪ್ರದಾಯದಂತೆ ಹಳದಿ, ಮೆಹಂದಿ, ಸಂಗೀತ್ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಮದುವೆಗೆ ಮುನ್ನ ಎರಡೂ ಕುಟುಂಬದವರು ಒಂದಾಗುವಂತೆ ವಿವಿಧ ಆಟಗಳು ಹಾಗೂ ಸಂಭ್ರಮಾಚರಣೆಗಳನ್ನು ನಡೆಸಲಾಗುತ್ತಿದೆ. ಇದೇ ವೇಳೆ, ತೆಲಂಗಾಣ ಮತ್ತು ಕೊಡವ ಸಂಸ್ಕೃತಿಗಳ ಸಂಪ್ರದಾಯಗಳನ್ನೂ ಮದುವೆಯಲ್ಲಿ ಅಳವಡಿಸಲಾಗುತ್ತಿದೆ. ವಿಜಯ್ ದೇವರಕೊಂಡ ಅವರು ತೆಲಂಗಾಣದ ಪದ್ಮಸಾಲಿ ಸಮುದಾಯಕ್ಕೆ ಸೇರಿದ್ದರೆ, ರಶ್ಮಿಕಾ ಮಂದಣ್ಣ ಕೊಡವ ಸಮುದಾಯದವರು. ಹೀಗಾಗಿ ಈ ಮದುವೆ ವಿಭಿನ್ನ ಸಂಪ್ರದಾಯಗಳ ವಿಶಿಷ್ಟ ಮಿಶ್ರಣವಾಗಲಿದೆ.
ಸೀಮಿತ ಅತಿಥಿಗಳ ಸಮ್ಮುಖದಲ್ಲಿ ವಿವಾಹ : ಮದುವೆ ಸಮಾರಂಭಕ್ಕೆ ಕುಟುಂಬದವರು, ಅತ್ಯಾಪ್ತ ಬಂಧುಗಳು ಮತ್ತು ಕೆಲವೇ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಅತ್ಯಂತ ಖಾಸಗಿ ರೀತಿಯಲ್ಲಿ ಸಮಾರಂಭ ನಡೆಯಲಿದೆ.
ಹೈದರಾಬಾದ್ನಲ್ಲಿ ಭವ್ಯ ರಿಸೆಪ್ಷನ್ : ಮಾರ್ಚ್ 04ರಂದು ಹೈದರಾಬಾದ್ ನಗರದ ಪ್ರಸಿದ್ಧ ತಾಜ್ ಕೃಷ್ಣಾ ಹೋಟೆಲ್ನಲ್ಲಿ ಭವ್ಯ ರಿಸೆಪ್ಷನ್ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಿನಿರಂಗದ ಗಣ್ಯರು ಹಾಗೂ ರಾಜಕೀಯ ಪ್ರಮುಖರು ಭಾಗವಹಿಸುವ ನಿರೀಕ್ಷೆಯಿದೆ. ಸದ್ಯ ಅಭಿಮಾನಿಗಳು ಈ ಜೋಡಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.