ಮುಂಬೈ, ಮಾ. 15 (DaijiworldNews/AA): ಖ್ಯಾತ ರ್ಯಾಪರ್ ಮತ್ತು ಗಾಯಕ ಬಾದ್ಶಾ ಅವರ ಇತ್ತೀಚಿನ 'ಟಟೀರಿ' ಹಾಡು ವಿವಾದ ಸೃಷ್ಟಿಸಿದ್ದು, ಅವರ ಬಂಧನಕ್ಕೆ ಸಿದ್ಧತೆ ನಡೆಯುತ್ತಿದೆ. ಇದೀಗ ಬಿಷ್ಣೋಯ್ ಗ್ಯಾಂಗ್ನಿಂದ ಅವರಿಗೆ ಪ್ರಾಣ ಬೆದರಿಕೆ ಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ ಬಿಷ್ಣೋಯ್ ಗ್ಯಾಂಗ್ನ ಸದಸ್ಯ ಎನ್ನಲಾದ ವ್ಯಕ್ತಿಯೊಬ್ಬ ಬಾದ್ಶಾಗೆ ಎಚ್ಚರಿಕೆ ನೀಡಿದ್ದಾನೆ. "ಗಾಯಕ ಬಾದ್ಶಾ, ನೀನು ಹರಿಯಾಣದ ಸಂಸ್ಕೃತಿಯನ್ನು ಹಾಳುಮಾಡಲು ಯತ್ನಿಸಿದೆ. 2024ರಲ್ಲಿ ನಿನ್ನ ಕ್ಲಬ್ನಲ್ಲಿ ನಾವು ಕೇವಲ ಟ್ರೈಲರ್ ತೋರಿಸಿದ್ದೆವು. ಆದರೆ ಈ ಬಾರಿ ನೇರವಾಗಿ ನಿನ್ನ ಹಣೆಗೆ ಗುಂಡಿಡುತ್ತೇವೆ" ಎಂದು ಸಂದೇಶ ಹಂಚಿಕೊಂಡಿದ್ದಾನೆ. ಇದೀಗ ಈ ಪೋಸ್ಟ್ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ನೊಂದೆಡೆ ಬಾದ್ಶಾ ಅವರಿಗೆ ಬಂಧನದ ಭೀತಿ ಎದುರಾಗಿದೆ. ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಮಾರ್ಚ್ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದರೂ ಬಾದ್ಶಾ ಗೈರುಹಾಜರಾಗಿದ್ದರು. ಈ ಹಿನ್ನೆಲೆ ಮಹಿಳಾ ಆಯೋಗವು ಬಾದ್ಶಾ ಅವರ ಪಾಸ್ಪೋರ್ಟ್ ಜಪ್ತಿ ಮಾಡಲು ಪೊಲೀಸರಿಗೆ ಸೂಚಿಸಿದೆ. ಜೊತೆಗೆ ಬಾದ್ಶಾ ಅವರನ್ನು ಕೂಡಲೇ ಬಂಧಿಸಲು ಹರಿಯಾಣ ಪೊಲೀಸರಿಗೆ ಮಹಿಳಾ ಆಯೋಗವು ನಿರ್ದೇಶನ ನೀಡಿದೆ.