ಬೆಂಗಳೂರು, ಮಾ. 20 (DaijiworldNews/AA): ಇದು ಉದ್ದೇಶಪೂರ್ವಕವಲ್ಲ, ನಿಮ್ಮ ಭಾವನೆಗಳನ್ನು ಗೌರವಿಸುತ್ತೇವೆ ಎಂದು ಕೆಡಿ ಸಿನಿಮಾದ 'ಸರ್ಸೆ ಸೆರಗ ಸರ್ಸೆ' ಹಾಡು ವಿವಾದಕ್ಕೆ ಗಾಯಕಿ ಮಂಗ್ಲಿ ಕ್ಷಮೆಯಾಚಿಸಿದ್ದಾರೆ.

'ಸರ್ಸೆ ಸೆರಗ ಸರ್ಸೆ' ಹಾಡನ್ನು ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಗಾಯಕಿ ಮಂಗ್ಲಿ ಅವರು ಹಾಡಿದ್ದು, "ವಿವಾದ ಬೆನ್ನಲ್ಲೇ ಜನರ ಬಳಿ ಕ್ಷಮೆ ಕೇಳಿದ್ದಾರೆ. ಪೋಸ್ಟ್ ಹಂಚಿಕೊಂಡಿರುವ ಅವರು, ಸಾರ್ವಜನಿಕರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಇದು ಉದ್ದೇಶಪೂರ್ವಕವಲ್ಲ. ಕ್ಷಮಿಸಿ. ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇವೆ" ಎಂದು ಪೋಸ್ಟ್ ಮಾಡಿದ್ದಾರೆ.
"ಈಗಾಗಲೇ ಹಾಡನ್ನು ಎಲ್ಲಾ ಕಡೆಯಿಂದ ತೆಗೆದುಹಾಕಲಾಗಿದೆ. ಸಿನಿಮಾ ತಂಡದ ಪರವಾಗಿ ಕ್ಷಮೆ ಕೇಳುತ್ತೇವೆ. ಹೊಸದಾಗಿ ಹಾಡು ರೆಕಾರ್ಡ್ ಮಾಡಿ, ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
ಈ ಹಾಡಿನ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ನಿರ್ದೇಶಕ ಪ್ರೇಮ್, ಕೆವಿಎನ್ ಗ್ರೂಪ್, ನಟಿ ನೋರಾ ಫತೇಹಿ, ರಕೀಬ್ ಆಲಂ, ನಟ ಸಂಜಯ್ ದತ್ಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಜೊತೆಗೆ ಮಾರ್ಚ್ 24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.