ಮಂಗಳೂರು, ಮಾ. 21 (DaijiworldNews/TA): ಮಂಗಳೂರು ಮೂಲದ ಬಾಲಿವುಡ್ ನಟಿ ಸ್ನೇಹಾ ಉಳ್ಳಾಲ್ ತಮ್ಮ ವೃತ್ತಿಜೀವನದ ಆರಂಭದ ದಿನಗಳು, ಸಲ್ಮಾನ್ ಖಾನ್ ಅವರೊಂದಿಗಿನ ಅನುಭವ ಮತ್ತು ಐಶ್ವರ್ಯಾ ರೈಅವರ ಭೇಟಿಯ ಕುರಿತು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಒಮನ್ನಲ್ಲಿ ಜನಿಸಿದರೂ ಮಂಗಳೂರು ಮೂಲದವರಾದ ಸ್ನೇಹಾ ಉಲ್ಲಾಳ್, 2005ರಲ್ಲಿ ಬಿಡುಗಡೆಯಾದ ಲಕ್ಕಿ : ನೋ ಟೈಮ್ ಫರ್ ಲವ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಆ ಸಮಯದಲ್ಲಿ ಅವರು ಐಶ್ವರ್ಯಾ ರೈ ಅವರಂತೆಯೇ ಕಾಣುತ್ತಿದ್ದರು ಎಂಬ ಕಾರಣಕ್ಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದರು.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಸ್ನೇಹಾ, ‘ನಾನು ಐಶ್ವರ್ಯರನ್ನು ಭೇಟಿಯಾದಾಗ ಅವರಿಗೆ ಕ್ಷಮೆ ಕೇಳಿದ್ದೆ. ಮಾಧ್ಯಮಗಳಲ್ಲಿ ನಡೆಯುತ್ತಿದ್ದ ಹೋಲಿಕೆಗಳಿಂದ ಅವರು ನನ್ನ ಮೇಲೆ ಬೇಸರಗೊಂಡಿರಬಹುದು ಎಂಬ ಭಯವಿತ್ತು. “ದಯವಿಟ್ಟು ನನ್ನನ್ನು ದ್ವೇಷಿಸಬೇಡಿ” ಎಂದು ಕೇಳಿಕೊಂಡಿದ್ದೆ’ ಎಂದು ಹೇಳಿದ್ದಾರೆ.
ಆದರೆ ಐಶ್ವರ್ಯಾ ರೈ ಅವರು ಬಹಳ ಆತ್ಮೀಯವಾಗಿ ವರ್ತಿಸಿ, ‘ಬಾಲಿವುಡ್ ಕುಟುಂಬಕ್ಕೆ ನಿನಗೆ ಸ್ವಾಗತ’ ಎಂದು ಹೇಳಿ ಪ್ರೋತ್ಸಾಹಿಸಿದರು ಎಂದು ಸ್ನೇಹಾ ನೆನಪಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ ಅವರು, ‘ಚಿತ್ರೀಕರಣದ ವೇಳೆ ಅವರು ನನ್ನನ್ನು ತುಂಬಾ ಬೆಂಬಲಿಸಿದರು. ನಾನು ಹೊಸಬಳಾಗಿದ್ದರೂ ಎಂದಿಗೂ ಅಸಹನೆ ತೋರಲಿಲ್ಲ. ಅತ್ಯಂತ ತಾಳ್ಮೆಯಿಂದ ಎಲ್ಲವನ್ನೂ ತಿಳಿಸಿದರು’ ಎಂದು ತಿಳಿಸಿದ್ದಾರೆ.
ತಮಗೆ ನಟಿಯಾಗುವ ಆಸಕ್ತಿ ಮೊದಲಿನಿಂದ ಇರಲಿಲ್ಲ ಎಂದು ಹೇಳಿದ ಸ್ನೇಹಾ, ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಅವರ ಸ್ನೇಹಿತರು ಕಾಲೇಜಿನಲ್ಲಿ ಮೊದಲ ಬಾರಿಗೆ ತಮ್ಮನ್ನು ಗಮನಿಸಿದ ವಿಚಾರವನ್ನೂ ಹಂಚಿಕೊಂಡಿದ್ದಾರೆ. ಆಗಲೇ ಸಲ್ಮಾನ್ ಮತ್ತು ಐಶ್ವರ್ಯ ರೈ ಅವರ ಸಂಬಂಧ ಮುರಿದುಬಿದ್ದಿದ್ದ ಸಮಯವಾಗಿತ್ತು. ಸ್ನೇಹಾ ಅವರ ರೂಪ ಐಶ್ವರ್ಯ ರೈ ಅವರನ್ನು ಹೋಲಿಸುತ್ತಿದ್ದ ಕಾರಣದಿಂದಲೇ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು ಎಂಬ ಮಾತುಗಳೂ ಹರಿದಾಡಿದ್ದವು. ಆ ಕುರಿತು ಪ್ರತಿಕ್ರಿಯಿಸಿದ ಸ್ನೇಹಾ, ‘ಅದು ಒಂದು ಪ್ರಚಾರ ತಂತ್ರವಾಗಿತ್ತು. ನಾನು ತುಂಬಾ ಚಿಕ್ಕವಳಾಗಿದ್ದರಿಂದ ಆ ಹೋಲಿಕೆಗಳು ನನಗೆ ಬೇಸರ ತರಲಿಲ್ಲ’ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಜೊತೆ ಬಾಲಿವುಡ್ಗೆ ಲಾಂಚ್ ಆದರೂ, ಸ್ನೇಹಾ ಉಲ್ಲಾಳ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಯಶಸ್ಸು ಕಂಡಿದ್ದಾರೆ. ವಿಶೇಷವಾಗಿ ತೆಲುಗಿನ ಉಲ್ಲಾಸ ಉತ್ಸಾಹ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ‘ದೇವಿ’ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ.