ಮುಂಬೈ, ಏ. 16 (DaijiworldNews/TA): ಪ್ರತಿಷ್ಠಿತ ಅಂತರಾಷ್ಟ್ರೀಯ ಮ್ಯಾಗಜೀನ್ ಟೈಮ್ ತನ್ನ ವಾರ್ಷಿಕ ‘ಟೈಮ್ಸ್ 100’ ಪಟ್ಟಿಯನ್ನು ಪ್ರಕಟಿಸಿದ್ದು, ವಿಶ್ವದ ಅತ್ಯಂತ ಪ್ರಭಾವಶಾಲಿ 100 ಮಂದಿಯಲ್ಲಿಗೆ ಈ ಬಾರಿ ಕೆಲವೇ ಭಾರತೀಯರು ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ, ಈ ಪಟ್ಟಿಯಲ್ಲಿ ಈ ಬಾರಿ ಕೇವಲ ಒಬ್ಬ ಭಾರತೀಯ ನಟನಿಗೆ ಮಾತ್ರ ಸ್ಥಾನ ದೊರೆತಿದ್ದು, ಆ ಗೌರವವನ್ನು ಬಾಲಿವುಡ್ ಸ್ಟಾರ್ ರಣ್ಬೀರ್ ಕಪೂರ್ ಪಡೆದಿದ್ದಾರೆ.

ರಣ್ಬೀರ್ ಕಪೂರ್ ಅವರು ತಮ್ಮ ಅಭಿನಯದ ಮೂಲಕ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿಯೂ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡಿದ್ದಾರೆ. ವಿಶೇಷವಾಗಿ ಅವರು ನಟಿಸುತ್ತಿರುವ ಬಹು ನಿರೀಕ್ಷಿತ ‘ರಾಮಾಯಣ’ ಸಿನಿಮಾ ಹಾಲಿವುಡ್ ಮಟ್ಟದಲ್ಲಿಯೂ ಗಮನ ಸೆಳೆಯುತ್ತಿರುವುದು ಅವರ ಈ ಸಾಧನೆಗೆ ಮತ್ತಷ್ಟು ಮೆರಗು ತಂದಿದೆ.
ಈ ಪಟ್ಟಿಯಲ್ಲಿ ರಣ್ಬೀರ್ ಕಪೂರ್ ಜೊತೆಗೆ ಪ್ರಸಿದ್ಧ ಭಾರತೀಯ ಶೆಫ್ ವಿಕಾಸ್ ಖನ್ನಾ ಕೂಡ ಸ್ಥಾನ ಪಡೆದಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಬಾಣಸಿಗರಾಗಿರುವ ವಿಕಾಸ್ ಖನ್ನಾ ಹಲವು ದೇಶಗಳಲ್ಲಿ ತಮ್ಮ ರೆಸ್ಟೋರೆಂಟ್ಗಳನ್ನು ನಡೆಸುತ್ತಿದ್ದು, ವಿಶ್ವ ನಾಯಕರಿಗೂ ವಿಶೇಷ ಆಹಾರ ತಯಾರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಇನ್ನೂ, ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚಾಯಿ ಅವರು ಸಹ ಈ ವರ್ಷದ ಟೈಮ್ಸ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದರೂ ಭಾರತೀಯ ಮೂಲ ಹೊಂದಿರುವ ಸುಂದರ್ ಪಿಚಾಯಿ ವಿಶ್ವದ ಅಗ್ರ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಗೂಗಲ್ ಅನ್ನು ಮುನ್ನಡೆಸುತ್ತಿದ್ದಾರೆ.
ಟೈಮ್ಸ್ 100 ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಗೌರವವೆಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಬಾಲಿವುಡ್ನ ಶಾರುಖ್ ಖಾನ್ ಹಾಗೂ ಆಮೀರ್ ಖಾನ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ರಣ್ಬೀರ್ ಕಪೂರ್ ಅವರಿಗೆ ಈ ಪಟ್ಟಿಯಲ್ಲಿ ಸ್ಥಾನ ದೊರೆತಿರುವುದು ಇದೇ ಮೊದಲ ಬಾರಿಗೆ ಎಂಬುದು ವಿಶೇಷ.
ಇದೀಗ ರಣ್ಬೀರ್ ಕಪೂರ್ ಅಭಿನಯದ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ ಇದೇ ದೀಪಾವಳಿಗೆ ಬಿಡುಗಡೆಯಾಗಲಿದ್ದು, ಅದಲ್ಲದೆ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಲವ್ ಆಂಡ್ ವಾರ್’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ‘ಬ್ರಹ್ಮಾಸ್ತ್ರ 2’ ಮತ್ತು ‘ಅನಿಮಲ್ ಪಾರ್ಕ್’ ಸಿನಿಮಾಗಳಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ, ಟೈಮ್ಸ್ 100 ಪಟ್ಟಿಯಲ್ಲಿ ರಣ್ಬೀರ್ ಕಪೂರ್ ಸ್ಥಾನ ಪಡೆದಿರುವುದು ಭಾರತೀಯ ಸಿನಿರಂಗಕ್ಕೆ ಹೆಮ್ಮೆಯ ವಿಚಾರವಾಗಿದೆ.