ಬೆಂಗಳೂರು, ಜೂ. 21 (DaijiworldNews/TA): ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಅಧಿಕೃತವಾಗಿದೆ. ಎರಡು ಬಾರಿ ಮುಂದೂಡಿಕೆಯಾಗಿದ್ದ ಈ ಪ್ಯಾನ್-ವರ್ಡ್ ಸಿನಿಮಾ ಇದೇ ವರ್ಷ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

‘ಕೆಜಿಎಫ್: ಚಾಪ್ಟರ್ 2’ ಬಳಿಕ ಯಶ್ ನಟಿಸುತ್ತಿರುವ ಮೊದಲ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಮೇಲೆ ಭಾರೀ ನಿರೀಕ್ಷೆ ಮೂಡಿದೆ. ಖ್ಯಾತ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ.
ಆರಂಭಿಕ ಯೋಜನೆಯ ಪ್ರಕಾರ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಹಲವು ಕಾರಣಗಳಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಎರಡು ಬಾರಿ ಮುಂದೂಡಲಾಯಿತು. ಮೊದಲ ಬಾರಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾದ ಯುದ್ಧ ಪರಿಸ್ಥಿತಿ ಹಾಗೂ ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲಾಗಿತ್ತು. ಬಳಿಕ ಚಿತ್ರದ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಮತ್ತೊಮ್ಮೆ ರಿಲೀಸ್ ಡೇಟ್ ಬದಲಾಯಿಸಲಾಯಿತು.
ಈಗ ಎಲ್ಲಾ ಕೆಲಸಗಳು ಅಂತಿಮ ಹಂತ ತಲುಪಿರುವ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ಸಿನಿಮಾ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ‘ಟಾಕ್ಸಿಕ್’ ಚಿತ್ರವನ್ನು ಕೇವಲ ಭಾರತೀಯ ಚಿತ್ರವಾಗಿ ಮಾತ್ರವಲ್ಲದೆ ಜಾಗತಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗುತ್ತಿದೆ. ವಿದೇಶದ ತಂತ್ರಜ್ಞರು ಮತ್ತು ಪ್ರಮುಖ ಸಂಸ್ಥೆಗಳು ಚಿತ್ರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿವೆ. ಈಗಾಗಲೇ ಯಶ್ ವಿದೇಶಿ ಮಾಧ್ಯಮಗಳಿಗೆ ಸಂದರ್ಶನ ನೀಡಿ ಚಿತ್ರದ ಬಗ್ಗೆ ಮಾತನಾಡಿರುವುದು ಕುತೂಹಲ ಹೆಚ್ಚಿಸಿದೆ. ಜಾಗತಿಕ ಮಟ್ಟದಲ್ಲಿ ಚಿತ್ರದ ಪ್ರಚಾರ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ.
ಚಿತ್ರದ ಟೀಸರ್ ಮತ್ತು ಪ್ರಚಾರ ವಿಡಿಯೊಗಳು ಬಿಡುಗಡೆಯಾದ ಬಳಿಕ ಸಿನಿಪ್ರಿಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಯಶ್ ಅವರ ಹೊಸ ಲುಕ್, ವಿಭಿನ್ನ ಶೈಲಿ ಮತ್ತು ಚಿತ್ರದ ಡಾರ್ಕ್ ಥೀಮ್ ಅಭಿಮಾನಿಗಳ ಗಮನ ಸೆಳೆದಿವೆ. ಮಾಸ್ ಆ್ಯಕ್ಷನ್ ಸಿನಿಮಾವೊಂದಕ್ಕೆ ಮಹಿಳಾ ನಿರ್ದೇಶಕಿ ಗೀತು ಮೋಹನ್ದಾಸ್ ಆ್ಯಕ್ಷನ್-ಕಟ್ ಹೇಳುತ್ತಿರುವುದು ಕೂಡ ಚಿತ್ರದ ಬಗ್ಗೆ ವಿಶೇಷ ಆಸಕ್ತಿ ಮೂಡಿಸಿದೆ.
‘ಟಾಕ್ಸಿಕ್’ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಅದರ ಭರ್ಜರಿ ತಾರಾಗಣ. ಚಿತ್ರದಲ್ಲಿ ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಶಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿವಿಧ ಭಾಷೆಗಳ ಖ್ಯಾತ ನಟಿಯರನ್ನು ಒಂದೇ ಚಿತ್ರದಲ್ಲಿ ಒಟ್ಟುಗೂಡಿಸಿರುವುದು ಸಿನಿಮಾದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಚಿತ್ರದಲ್ಲಿ ಯಶ್ ಎರಡು ವಿಭಿನ್ನ ಗೆಟಪ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಈಗಾಗಲೇ ಕುತೂಹಲ ಮೂಡಿಸಿದೆ. ಅವರ ರಗಡ್ ಲುಕ್ ಮತ್ತು ಆ್ಯಕ್ಷನ್ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದಲ್ಲದೆ ಚಿತ್ರದ ಕಥೆ ಮತ್ತು ಬರವಣಿಗೆಯ ಪ್ರಕ್ರಿಯೆಯಲ್ಲೂ ಯಶ್ ಸಕ್ರಿಯವಾಗಿ ಭಾಗಿಯಾಗಿರುವುದು ವಿಶೇಷ.
‘ಕೆಜಿಎಫ್’ ಬಳಿಕ ಯಶ್ ಅವರ ಮುಂದಿನ ಸಿನಿಮಾ ಯಾವ ಮಟ್ಟದಲ್ಲಿ ಇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಭಾರೀ ಬಜೆಟ್, ಅಂತರರಾಷ್ಟ್ರೀಯ ಮಟ್ಟದ ನಿರ್ಮಾಣ, ಸ್ಟಾರ್ ತಾರಾಗಣ ಮತ್ತು ವಿಭಿನ್ನ ಕಥಾಹಂದರದೊಂದಿಗೆ ಬರುತ್ತಿರುವ ‘ಟಾಕ್ಸಿಕ್’ ಈಗಾಗಲೇ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಎರಡು ಬಾರಿ ಮುಂದೂಡಿಕೆಯಾಗಿದ್ದ ಚಿತ್ರದ ಬಿಡುಗಡೆ ದಿನಾಂಕ ಈಗ ಅಂತಿಮಗೊಂಡಿರುವುದರಿಂದ, ಆಗಸ್ಟ್ 26ರಂದು ಯಶ್ ಅಭಿಮಾನಿಗಳಿಗೆ ಭರ್ಜರಿ ಸಿನಿಮಾ ಹಬ್ಬ ಕಾದಿದೆ.