ಚೆನ್ನೈ, ಜೂ. 23 (DaijiworldNews/AK): ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು ಇದೀಗ ಹಿಟ್ ಆಗಿದೆ.

ಕುಟುಂಬಗಳು ವಿಶೇಷವಾಗಿ ಮಹಿಳೆಯರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರು ಮಾತ್ರವೇ ಕೆಲ ಸಿನಿಮಾ ಸೆಲೆಬ್ರಿಟಿಗಳು ಸಹ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಅವರಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ಸಹ ಒಬ್ಬರು.
ಸಿನಿಮಾ ನೋಡಿ ಮೆಚ್ಚಿಕೊಂಡ ಮೆಗಾಸ್ಟಾರ್ ಚಿರಂಜೀವಿ, ಇಡೀ ಕುಟುಂಬವನ್ನು ಮನೆಗೆ ಆದರಿಸಿ ಸತ್ಕರಿಸಿದ್ದಾರೆ. ಜೊತೆಗೆ ತಾಯಿ ಆಗಲಿರುವ ಸಮಂತಾ ಅವರಿಗೆ ವಿಶೇಷ ಉಡುಗೊರೆಗಳನ್ನು ಸಹ ನೀಡಿ ಆಶೀರ್ವದಿಸಿದ್ದಾರೆ.
‘ಮಾ ಇಂಟಿ ಬಂಗಾರಂ’ ಸಿನಿಮಾದ ತಂಡವನ್ನು ಮನೆಗೆ ಆಹ್ವಾನಿಸಿದ್ದ ಚಿರಂಜೀವಿ, ತಾಯಿ ಆಗುತ್ತಿರುವ ಸಮಂತಾ ಅವರಿಗೆ ಸೀರೆ ಇನ್ನಿತರೆ ಪವಿತ್ರ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಮಂತಾ ಅವರಿಗೆ ಶಂಖವೊಂದನ್ನು ಸಹ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ನೀಡಿದ್ದಾರೆ. ಚಿತ್ರಗಳನ್ನು ಖುದ್ದು ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಮಂತಾಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.