ಚೆನ್ನೈ, ಜು. 25 (DaijiworldNews/AA): ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಖ್ಯಾತ ತಮಿಳು ನಟಿ ಜ್ಯೋತಿಕಾ ಸಾಮಾಜಿಕ ಜಾಲಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಧರ್ಮೇಂದ್ರ ಪ್ರಧಾನ್ ಅವರೇ, ಹುದ್ದೆಯಿಂದ ಕೆಳಗಿಳಿಯಿರಿ. ರಾಜೀನಾಮೆ ನೀಡಿ. ನಾನು ವಿದ್ಯಾರ್ಥಿಗಳು ಮತ್ತು ನಮ್ಮ ದೇಶದ ಭವಿಷ್ಯದ ಪರವಾಗಿದ್ದೇನೆ. ನಾನು ಹೊಣೆಗಾರಿಕೆಯ ಪರವಾಗಿದ್ದೇನೆ. ನಾನು ಪ್ರಜಾಪ್ರಭುತ್ವ ಭಾರತದ ಪರವಾಗಿದ್ದೇನೆ. ನಾನು ಸುಧಾರಿತ ಶಿಕ್ಷಣ ವ್ಯವಸ್ಥೆಯ ಪರವಾಗಿದ್ದೇನೆ" ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
"ತಾಯಂದಿರಾಗಿ ನಮ್ಮ ಮಕ್ಕಳನ್ನು ನಿಮ್ಮಂತೆಯೇ ಬೆಳೆಸಲು ನಾವು ಬಯಸುತ್ತೇವೆ. ಯಾವುದೇ ಮುಚ್ಚುಮರೆಯಿಲ್ಲದೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಜೆನ್ ಜಿ ಪೀಳಿಗೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಎಲ್ಲರೂ ಒಗ್ಗೂಡಿ ನಾವೇ ಭಾರತ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ" ಎಂದು ಸೋನಂ ವಾಂಗ್ಚುಕ್, ಅಭಿಜೀತ್ ದೀಪ್ಕೆ ಹಾಗೂ ಸೌರವ್ ದಾಸ್ ಅವರನ್ನು ಶ್ಲಾಘಿಸಿದ್ದಾರೆ.
"ಹೋರಾಟಗಾರರು ಒತ್ತಡದ ವಾತಾವರಣವನ್ನ ಮುರಿದು ಜನರಲ್ಲಿ ನಿರ್ಭೀತಿ ಮೂಡಿಸಿದ್ದಾರೆ. ಒತ್ತಡದ ವಾತಾವರಣವನ್ನು ಮುರಿದಿದ್ದಕ್ಕಾಗಿ ಮತ್ತು ನಮ್ಮನ್ನು ನಿರ್ಭೀತರನ್ನಾಗಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.