ಮುಂಬೈ, ಜು. 26 (DaijiworldNews/AK): ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅವರನ್ನು ಬಿಗ್ ಸ್ಕ್ರೀನ್ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆದರೆ ಇವರಿಬ್ಬರೂ ಇದುವರೆಗೆ ಯಾವುದೇ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ ಎಂಬ ಕುತೂಹಲಕಾರಿ ವಿಷಯ ಹೊರಬಿದ್ದಿದೆ. ಇತ್ತೀಚೆಗೆ ನಡೆದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ರಣ್ಬೀರ್ ಕಪೂರ್, ಚಿತ್ರದ ಪ್ರಮುಖ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಇನ್ನೂ ಬಾಕಿಯಿದೆ ಎಂದು ತಿಳಿಸಿದ್ದಾರೆ. ಸಿನಿಮಾದಲ್ಲಿ ಇಬ್ಬರ ಪಾತ್ರಗಳು ಅತ್ಯಂತ ಪ್ರಮುಖವಾಗಿದ್ದರೂ, ಅವರು ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯಗಳು ಕಥೆಯ ಕೊನೆಯಲ್ಲಿ ಬರಲಿವೆ ಎಂದು ರಣಬೀರ್ ಹೇಳಿದ್ದಾರೆ.
ಚಿತ್ರದ ಕೊನೆಯಲ್ಲಿ ಶ್ರೀರಾಮ ಮತ್ತು ರಾವಣ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಮಧ್ಯದಲ್ಲಿ ಬಹುಶಃ ಒಂದು ಭೇಟಿಯಿರಬಹುದು. ಆದರೆ ನಾವು ಇನ್ನೂ ಆ ದೃಶ್ಯಗಳನ್ನು ಚಿತ್ರೀಕರಿಸಿಲ್ಲ. ಹಾಗಾಗಿ ನಮಗೆ ಇಬ್ಬರಿಗೂ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ. ಆದರೆ ನನಗೆ ಯಶ್ ಅವರ ಪರಿಚಯ ಸಾಕಷ್ಟು ಸಮಯದಿಂದ ಇದೆ ಮತ್ತು ನಾನು ಅವರ ನಟನೆಯ ದೊಡ್ಡ ಅಭಿಮಾನಿ. ರಾವಣನ ಪಾತ್ರ ಮಾಡಲು ಅವರಂತಹ ನಟನೇ ಬೇಕಿತ್ತು’ ಎಂದು ರಣಬೀರ್ ಹೊಗಳಿದ್ದಾರೆ.ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರವನ್ನು ನಿಭಾಯಿಸಿರುವ ಶೈಲಿಯನ್ನು ರಣಬೀರ್ ಕಪೂರ್ ಶ್ಲಾಘಿಸಿದ್ದಾರೆ. ‘ನಾವು ಹಲವು ವರ್ಷಗಳಿಂದ ರಾವಣನ ಪಾತ್ರವನ್ನು ಒಂದೇ ರೀತಿಯ ಸಾಂಪ್ರದಾಯಿಕ ಶೈಲಿಯಲ್ಲಿ ನೋಡಿಕೊಂಡು ಬಂದಿದ್ದೇವೆ. ಆದರೆ ಯಶ್ ಅವರು ಈ ಪಾತ್ರವನ್ನು ಅತ್ಯಂತ ಸ್ವ್ಯಾಗ್ ಹಾಗೂ ಪ್ರಾಮಾಣಿಕತೆಯಿಂದ ನಟಿಸಿದ್ದು, ರಾವಣನ ಪಾತ್ರಕ್ಕೆ ಜೀವ ತುಂಬಿದ್ದಾರೆ’ ಎಂದು ತಿಳಿಸಿದ್ದಾರೆ.
ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ, ಯಶ್ ಅವರು ರಾವಣನಾಗಿ ಹಾಗೂ ಸಾಯಿ ಪಲ್ಲವಿ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಸನ್ನಿ ಡಿಯೋಲ್ ಹನುಮಂತನಾಗಿ, ರವಿ ದುಬೆ ಲಕ್ಷ್ಮಣನಾಗಿ ಬಣ್ಣ ಹಚ್ಚಿದ್ದಾರೆ. ಅರುಣ್ ಗೋವಿಲ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಶೀಬಾ ಚಡ್ಡಾ ಮತ್ತು ಇಂದಿರಾ ಕೃಷ್ಣನ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.