ಮುಂಬೈ, ಆ. 16 (DaijiworldNews/AA): ಮಹಾರಾಷ್ಟ್ರದಲ್ಲಿ ನಿಷೇಧಿತ ಉತ್ಪನ್ನವಾಗಿರುವ ಪಾನ್ ಮಸಾಲಾವನ್ನು ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಈ ಮೂವರು ನಟರು 2024 ರಲ್ಲಿ ಪಾನ್ ಮಸಾಲಾ ಕಂಪನಿಯಾದ ವಿಮಲ್ ಎಲೈಚಿ ಉತ್ಪನ್ನದ ಪ್ರಚಾರಕ್ಕಾಗಿ ಒಟ್ಟಿಗೆ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಈ ಮೂವರಿಗೆ ಮಹಾರಾಷ್ಟ್ರದ ಆಹಾರ ಸುರಕ್ಷತಾ ಮುಖ್ಯಸ್ಥ ತುಕಾರಾಂ ಮುಂಡೆ ಅವರು ಆಗಸ್ಟ್ 11 ರಂದು ಈ ನೋಟಿಸ್ ನೀಡಿದ್ದರು.
ತಕ್ಷಣವೇ ಈ ಜಾಹೀರಾತು ಅಭಿಯಾನದಲ್ಲಿ ಭಾಗವಹಿಸುವುದನ್ನು ನಿಲ್ಲಿಸಬೇಕು. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಿಂದ ಈ ಜಾಹೀರಾತಿಗೆ ಸಂಬಂಧಿಸಿದ ಎಲ್ಲಾ ಪ್ರಚಾರದ ವಿಷಯಗಳನ್ನು ತೆಗೆದುಹಾಕಬೇಕು ಎಂದು ನಟರಿಗೆ ಸೂಚನೆ ನೀಡಿದ್ದಾರೆ.
ಈ ಜಾಹೀರಾತನ್ನು ಪರಿಶೀಲಿಸಿದಾಗ, ಮಹಾರಾಷ್ಟ್ರ ರಾಜ್ಯದಲ್ಲಿ ಉತ್ಪಾದನೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುವ ವಿಮಲ್ ಪಾನ್ ಮಸಾಲಾ ಬ್ರ್ಯಾಂಡ್ಗೆ ಪೂರಕವಾಗಿ ಈ ಜಾಹೀರಾತು ಪ್ರಚಾರ ನೀಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಜಾಹೀರಾತಿನಲ್ಲಿ 'ವಿಮಲ್ ಎಲೈಚಿ' ಎಂಬ ಪದವನ್ನು ಬಳಸಲಾಗಿರುವುದು ಗ್ರಾಹಕರನ್ನು ದಾರಿತಪ್ಪಿಸುವ ಮತ್ತು ನಿಷೇಧಿತ ಉತ್ಪನ್ನದ ಬ್ರ್ಯಾಂಡ್ ಹೆಸರನ್ನು ಪರೋಕ್ಷವಾಗಿ ಪ್ರಚಾರ ಮಾಡುವ ಸಾಧ್ಯತೆಯಿದೆ ಎಂದು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲೇಖಿಸಿ ಎಫ್ಡಿಎ ಹೇಳಿದೆ. ನಟರು ಮಾಡಿಕೊಂಡಿರುವ ಒಪ್ಪಂದದ ಪ್ರತಿಗಳು, ಪಾವತಿ ವಿವರಗಳು ಮತ್ತು ಜಾಗರೂಕತೆಯ ಪುರಾವೆಗಳನ್ನು ಸಲ್ಲಿಸುವಂತೆ ಮುಂಡೆ ನಿರ್ದೇಶಿಸಿದ್ದಾರೆ.