ಮುಂಬೈ, ಸೆ. 04 (DaijiworldNews/AK): ಸಿನಿಮಾಗಳಲ್ಲಿ ಮಹಿಳೆಯರನ್ನು ಗ್ಲಾಮರಸ್ ಆಗಿ ತೋರಿಸುವ ಸಂಸ್ಕೃತಿ ಹೆಚ್ಚುತ್ತಿದೆ. ಈ ಬಗ್ಗೆ ನಟಿ ತಾಪ್ಸಿ ಪನ್ನು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದ ನಿರ್ಮಾಪಕರು ಪ್ರೇಕ್ಷಕರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಪ್ರೇಕ್ಷಕರು ಇಂತಹ ದೃಶ್ಯಗಳನ್ನು ಬಯಸುತ್ತಾರೆ ಎಂದು ಚಿತ್ರತಂಡ ಸಮರ್ಥಿಸಿಕೊಳ್ಳುತ್ತದೆ. ನಟಿಯ ಹೇಳಿಕೆ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.
ಇತ್ತೀಚೆಗೆ ತೆರೆಕಂಡ ಬೃಹತ್ ಬಜೆಟ್ ಸಿನಿಮಾಗಳಲ್ಲಿ ಮಹಿಳೆಯರ ಪಾತ್ರಗಳನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ‘ಸೋಶಿಯಲ್ ಮೀಡಿಯಾದಲ್ಲಿ ಎಷ್ಟೇ ವಿರೋಧ ಬಂದರೂ ಪ್ರೇಕ್ಷಕರ ಬೆಂಬಲವಿಲ್ಲದೆ ಇದನ್ನು ತಡೆಯಲು ಸಾಧ್ಯವಿಲ್ಲ. ಚಿತ್ರರಂಗದಲ್ಲಿ ಸೃಜನಶೀಲತೆಗಿಂತ ವ್ಯಾಪಾರವೇ ಮುಖ್ಯವಾಗಿದೆ’ ಎಂದು ಅವರು ಕಿಡಿಕಾರಿದ್ದಾರೆ.
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಮೇಲೆಯೂ ಇದೇ ರೀತಿಯ ಆರೋಪಗಳು ಕೇಳಿಬಂದಿವೆ. ಚಿತ್ರ ಬಿಡುಗಡೆಗೂ ಮುನ್ನವೇ ಮಹಿಳಾ ಪಾತ್ರಗಳ ಬಿಂಬಿಸುವಿಕೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಪ್ರಮುಖ ಮಹಿಳಾ ಪಾತ್ರಗಳನ್ನು ಕೇವಲ ಗ್ಲಾಮರ್ ಪ್ರದರ್ಶನಕ್ಕೆ ಸೀಮಿತಗೊಳಿಸಲಾಗಿದೆ ಎಂದು ಪ್ರೇಕ್ಷಕರು ಆರೋಪಿಸಿದ್ದಾರೆ. ನಾಯಕನ ಸುತ್ತ ಸಾಗುವ ಕಥೆಯಲ್ಲಿ ಮಹಿಳೆಯರಿಗೆ ಸೂಕ್ತ ಗೌರವ ನೀಡಿಲ್ಲ ಎಂಬ ಆಕ್ಷೇಪವನ್ನು ಕೆಲವರು ಮಾಡಿದ್ದಾರೆ.