ಮುಂಬೈ, ಸೆ. 05 (DaijiworldNews/AA): ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೇಲರ್ ಕುರಿತು ಪ್ರತಿಕ್ರಿಯಿಸಿದ ಹಿರಿಯ ನಟ ಮುಕೇಶ್ ಖನ್ನಾ, ಟ್ರೇಲರ್ನಲ್ಲಿ ರಾವಣನ ಪಾತ್ರಕ್ಕೆ ಶ್ರೀರಾಮನಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮವೊಂದರಲ್ಲಿ ರಾಮಾಯಣ ಚಿತ್ರದಲ್ಲಿ ನಟ ಯಶ್ ಅವರ ರಾವಣನ ಪಾತ್ರದ ಬಗ್ಗೆ ಮಾತನಾಡಿದ ಅವರು, "ಟ್ರೇಲರ್ನಲ್ಲಿ ರಾವಣನ ಪಾತ್ರಕ್ಕೆ ಶ್ರೀರಾಮನಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸರಿಯಲ್ಲ. ಶ್ರೀರಾಮನಿಗಿಂತ ರಾವಣನೇ ಹೆಚ್ಚಾಗಿ ಕಾಣಿಸಿಕೊಂಡರೆ ಭಕ್ತರ ನಂಬಿಕೆಗೆ ಧಕ್ಕೆಯಾಗಲಿದೆ. ಮಹಾಭಾರತದಲ್ಲಿ ತಾವು ಭೀಷ್ಮ ಪಾತ್ರ ಮಾಡಲು ಉತ್ತಮ ಸಂಭಾಷಣೆಗಳೇ ಕಾರಣವಾಗಿದ್ದವು" ಎಂದಿದ್ದಾರೆ.
"ನಟರಿಗೆ ಸಿಗುವ ಪಾತ್ರ ಮತ್ತು ಸಂಭಾಷಣೆಗಳು ಸಿನಿಮಾ ಯಶಸ್ಸಿಗೆ ಮುಖ್ಯ ಕಾರಣವಾಗುತ್ತವೆ. ಧುರಂಧರ್ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಉತ್ತಮ ಅಭಿನಯ ನೀಡಲು ನಿರ್ದೇಶಕರ ಶ್ರಮವೇ ಕಾರಣ. ಅವರಿಗೆ ನೀಡಲಾದ ಸನ್ನಿವೇಶಗಳು ಮತ್ತು ಸಂಭಾಷಣೆಗಳು ಪಾತ್ರವನ್ನು ಎತ್ತಿಹಿಡಿದಿದ್ದವು. ಹಾಗೆಯೇ ರಾಮಾಯಣ ಚಿತ್ರದಲ್ಲೂ ಯಶ್ ಅವರಿಗೆ ಸೂಕ್ತ ಸಂಭಾಷಣೆಗಳನ್ನು ನೀಡಿರುವುದರಿಂದ ರಾವಣನ ಪಾತ್ರಕ್ಕೆ ಹೆಚ್ಚು ಮೆರುಗು ಬಂದಿರಬಹುದು" ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, "ಅನಿಮಲ್ ಸಿನಿಮಾದ ನಂತರ ರಣಬೀರ್ ಕಪೂರ್ ಅವರಿಗೆ ಹೊಸ ಇಮೇಜ್ ಬಂದಿದೆ. ಪ್ರೇಕ್ಷಕರು ರಣಬೀರ್ ಅವರನ್ನು ಅದೇ ಹಳೆಯ ಇಮೇಜ್ ಮೂಲಕ ನೋಡಬಾರದು. ಅನಿಮಲ್ ಚಿತ್ರದಲ್ಲಿದ್ದ ರಣಬೀರ್ ಪಾತ್ರವು ಮಕ್ಕಳಿಗೆ ತಪ್ಪು ಸಂದೇಶ ನೀಡಿತ್ತು. ಆ ಚಿತ್ರದ ಶೈಲಿ ತಮಗೂ ವೈಯಕ್ತಿಕವಾಗಿ ಇಷ್ಟವಾಗಿರಲಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.