ಚೆನ್ನೈ, ಸೆ. 10 (DaijiworldNews/AK): ಮಯೋಸೈಟಿಸ್ ಕಾಯಿಲೆಯಿಂದ ಚೇತರಿಸಿಕೊಂಡ ನಟಿ ಸಮಂತಾ, ಸಿನಿಮಾ ರಂಗ ತೊರೆಯಲು ನಿರ್ಧರಿಸಿದ್ದರು. ಅನಾರೋಗ್ಯದ ಕಾರಣ ಚಿತ್ರರಂಗಕ್ಕೆ ವಿದಾಯ ಹೇಳಲು ನಿರ್ಧಾರ ಮಾಡಿದ್ದರು.

ನಂತರ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು, ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದರು. ಆದರೆ, ನಿರ್ದೇಶಕ ರಾಜ್ ನಿಡಿಮೋರು ಒತ್ತಾಯದ ಮೇರೆಗೆ ಮತ್ತೆ ಬಣ್ಣದ ಲೋಕಕ್ಕೆ ಮರಳಿದರು. ‘ಮಾ ಇಂಟಿ ಬಂಗಾರಂ’ ಚಿತ್ರದ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ.
ಸಮಂತಾ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರು ನಾಗ ಚೈತನ್ಯ ಜೊತೆ ಮದುವೆ ಆಗಿದ್ದರು. ಆದರೆ, ನಾಲ್ಕೇ ವರ್ಷಗಳಲ್ಲಿ ಇವರ ಸಂಸಾರ ಮುರಿದುಬಿತ್ತು. ಈ ಸಮಯದಲ್ಲೇ ಅವರಿಗೆ ಮತ್ತೊಂದು ಶಾಕ್ ಎದುರಾಗಿತ್ತು. 2022ರಲ್ಲಿ ಸಮಂತಾಗೆ ಮಯೋಸೈಟಿಸ್ ರೋಗ ಪತ್ತೆಯಾಗಿತ್ತು. ಚಿಕಿತ್ಸೆ ಪಡೆಯುವಾಗ ಅಭಿನಯಕ್ಕೆ ವಿರಾಮ ನೀಡಿದ್ದರು. ವೈದ್ಯರ ಸಲಹೆಯಂತೆ ಸರಳ ಜೀವನ ನಡೆಸಲು ಬಯಸಿದ್ದರು. ಇದರಿಂದಾಗಿ ನಟನೆಯಿಂದ ದೂರ ಉಳಿಯಲು ಗಂಭೀರವಾಗಿ ಯೋಚಿಸಿದ್ದರು.
ಸಿನಿಮಾದಿಂದ ದೂರವಾದ ಬಳಿಕ ಉದ್ಯಮ ಕ್ಷೇತ್ರಕ್ಕೆ ಹೆಜ್ಜೆ ಇಟ್ಟರು. ಅನೇಕ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಿದರು ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ನಿರ್ಮಾಣ ಮಾಡಲು ಸಮಂತಾ ನಿರ್ಧರಿಸಿದ್ದರು. ಆದರೆ ರಾಜ್ ನಿಡಿಮೋರು ಅವರನ್ನು ನಟಿಸುವಂತೆ ಮನವೊಲಿಸಿದರು. ನಟಿಸಲು ಸಮಂತಾ ಮೊದಲು ಹಿಂದೇಟು ಹಾಕಿದ್ದರು. ಕೊನೆಗೆ ಅವರ ಒತ್ತಾಯಕ್ಕೆ ಒಪ್ಪಿ ಬಣ್ಣ ಹಚ್ಚಿದರು.
ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿ ಗಳಿಸಿತು. ತೆಲುಗಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮಹಿಳಾ ಪ್ರಧಾನ ಸಿನಿಮಾವಾಯಿತು. ಸಮಂತಾ ಅವರ ಕಮ್ಬ್ಯಾಕ್ ಸಿನಿಮಾಗೆ ಪ್ರೇಕ್ಷಕರಿಂದ ಜೈಕಾರ ಸಿಕ್ಕಿದೆ.