ಮುಂಬೈ, ಸೆ. 11 (DaijiworldNews/ AK): ನಟ-ನಟಿಯರು ಸೋತ ಸಿನಿಮಾನಲ್ಲಿ ನಟಿಸಿದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸುವುದು ಸಾಮಾನ್ಯ, ಆದರೆ ಬಾಲಿವುಡ್ ನಟ ಸೈಫ್ ಅಲಿ ಖಾನ್, ಹಿಟ್ ಸಿನಿಮಾನಲ್ಲಿ ನಟಿಸಿದ್ದಕ್ಕೂ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ಆ ಸಿನಿಮಾನಲ್ಲಿ ನಾನು ನಟಿಸಬಾರದಿತ್ತು ಎಂದಿದ್ದಾರೆ. ಅದುವೇ 2012ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್ಟೇಲ್’. ಆ ಸಿನಿಮಾನಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಿಯಾನಾ ಪೆಂಟಿ ನಟನೆ ಮಾಡಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್, ಆ ಸಿನಿಮಾನಲ್ಲಿ ನಾನು ನಟಿಸಬಾರದಿತ್ತು ಎಂದಿದ್ದಾರೆ.
‘ಕಾಕ್ಟೇಲ್’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಅದರ ಸಹನಿರ್ಮಾಪಕರೂ ಆಗಿದ್ದರು ಸೈಫ್ ಅಲಿ ಖಾನ್. ಇದೀಗ ‘ಗಲ್ಫ್ ನ್ಯೂಸ್’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್, ‘ಕಾಕ್ಟೈಲ್’ ಚಿತ್ರದಲ್ಲಿ ‘ಗೌತಮ್’ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಆ ಪಾತ್ರಕ್ಕಾಗಿ ಅಲ್ಲ, ಬದಲಿಗೆ ಸಿನಿಮಾ ಹೇಗಾದರೂ ಮಾಡಿ ಸೆಟ್ಟೇರಲಿ ಎಂಬ ಕಾರಣಕ್ಕಾಗಿ ಎಂದಿದ್ದಾರೆ.
‘ನಾನು ಆ ಪಾತ್ರವನ್ನು ಮಾಡಿದೆ ಏಕೆಂದರೆ ನಾವು ಅದನ್ನು ನಿರ್ಮಿಸುತ್ತಿದ್ದೆವು. ನೂರಕ್ಕೆ ನೂರು ಪ್ರತಿಶತ ಅದು ತಪ್ಪೇ ಆಗಿತ್ತು, ಮತ್ತು ಅದು ಪ್ರಗತಿಪರ ಅಲ್ಲದ ಸ್ಕ್ರಿಪ್ಟ್ ಆಯ್ಕೆಯಾಗಿತ್ತು. ನಾನು ಆ ಪಾತ್ರಕ್ಕಾಗಿ ಅದನ್ನು ಮಾಡಲಿಲ್ಲ, ಬದಲಿಗೆ ಸಿನಿಮಾ ನಿರ್ಮಾಣಗೊಳ್ಳಬೇಕು ಎಂಬ ಕಾರಣಕ್ಕೆ ಮಾಡಿದೆ. ನಾವು ವಿವಿಧ ಕಾರಣಗಳಿಗಾಗಿ ಕೆಲಸಗಳನ್ನು ಮಾಡುತ್ತೇವೆ. ಅತ್ಯಾಕರ್ಷಕ ಪಾತ್ರ ಯಾವುದೆಂದರೆ ಅದು ವೆರೋನಿಕಾ ಪಾತ್ರ ಎಂಬುದು ನನಗೆ ಚೆನ್ನಾಗಿ ತಿಳಿದಿತ್ತು’ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ‘ಕಾಕ್ಟೇಲ್ 2’ ಸಿನಿಮಾ ಸಹ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ಕೃತಿ ಸನೋನ್ ಮತ್ತು ನಟ ಶಾಹಿದ್ ಕಪೂರ್ ಒಟ್ಟಿಗೆ ನಟಿಸಿದ್ದರು. ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸನ್ನಷ್ಟೆ ಈ ಸಿನಿಮಾ ಕಂಡಿತು.