ಹೈದರ್ಬಾದ್, ಅ.05 (DaijiworldNews/AK) : ಚಿತ್ರರಂಗದ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಪ್ರೇಮ ಪಯಣ ಹಾಗೂ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಸಹಕಲಾವಿದರಾಗಿ ಆರಂಭವಾದ ಇವರ ಪರಿಚಯ ನಂತರ ಜೀವನ ಸಂಗಾತಿಗಳಾಗುವವರೆಗೆ ಬೆಳೆದುಬಂದ ಹಾದಿ ಅಪರೂಪದ್ದಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಇಬ್ಬರೂ ತಮ್ಮ ನಡುವಿನ ನಂಟಿನ ಆರಂಭಿಕ ದಿನಗಳ ಸಿಹಿ-ಖಾರ ನೆನಪುಗಳನ್ನು ಅಭಿಮಾನಿಗಳೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ಪ್ರೀತಿಯ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ದಿನಗಳು ಕಳೆದಂತೆ ಇಬ್ಬರ ನಡುವಿನ ಒಡನಾಟ ಹೆಚ್ಚಾಯಿತು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಹಲವು ವರ್ಷಗಳ ಸಮಯ ಬೇಕಾಯಿತು ಎಂದು ವಿಜಯ್ ನೆನಪಿಸಿಕೊಂಡಿದ್ದಾರೆ.
‘ಗೀತ ಗೋವಿಂದಂ’ ಚಿತ್ರೀಕರಣದ ಮೊದಲ ದಿನದಂದು ನಡೆದ ಸ್ವಾರಸ್ಯಕರ ಘಟನೆಯನ್ನು ರಶ್ಮಿಕಾ ಬಿಚ್ಚಿಟ್ಟಿದ್ದಾರೆ. ಕ್ಯಾರವಾನ್ನಲ್ಲಿ ರಶ್ಮಿಕಾ ಹಾಕಿದ್ದ ಹಾಡನ್ನು ಕೇಳಿ ವಿಜಯ್ ಮುಖಭಾವ ಬದಲಿಸಿದ್ದರು. ‘ಆ ಹಾಡನ್ನು ಬಂದ್ ಮಾಡು’ ಎಂದು ವಿಜಯ್ ಜೋರಾಗಿ ಹೇಳಿದ್ದರು. ಈ ಘಟನೆಯಿಂದ ರಶ್ಮಿಕಾ ತೀವ್ರ ಬೇಸರಗೊಂಡು ಭಾವುಕರಾಗಿದ್ದ ಸಂಗತಿಯನ್ನು ವಿಜಯ್ ನಂತರ ತಿಳಿದರು.
ಸಂಬಂಧದಲ್ಲಿ ರಶ್ಮಿಕಾ ಅವರೇ ಹೆಚ್ಚು ಪರಿಪಕ್ವತೆಯಿಂದ ನಡೆದುಕೊಳ್ಳುತ್ತಾರೆ ಎಂದು ವಿಜಯ್ ಹೊಗಳಿದ್ದಾರೆ. ಸಣ್ಣಪುಟ್ಟ ಪ್ರೀತಿಯ ಕ್ಷಣಗಳು ಮತ್ತು ದಿನನಿತ್ಯದ ಕಾಳಜಿ ಸಂಬಂಧವನ್ನು ಗಟ್ಟಿಮಾಡುತ್ತದೆ ಎಂಬುದು ರಶ್ಮಿಕಾ ವಾದವಾಗಿದೆ. ದಿನಕ್ಕೆ ಹಲವು ಬಾರಿ ಪ್ರೀತಿಯನ್ನು ವ್ಯಕ್ತಪಡಿಸುವುದು ದಾಂಪತ್ಯಕ್ಕೆ ಅಗತ್ಯ ಎಂದು ರಶ್ಮಿಕಾ ನಂಬುತ್ತಾರೆ.
ತಮ್ಮ ಸಂಬಂಧದ ಬೆಳವಣಿಗೆಯ ಹಿಂದೆ ದೇವರ ಕೃಪೆಯಿದೆ ಎಂದು ರಶ್ಮಿಕಾ ಭಕ್ತಿಯಿಂದ ಹೇಳಿಕೊಂಡಿದ್ದಾರೆ. ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದು ಇಬ್ಬರನ್ನೂ ಹತ್ತಿರ ತಂದಿತು. ಪ್ರಸ್ತುತ ಈ ಜೋಡಿ ‘ರಣಬಾಲಿ’ ಚಿತ್ರದಲ್ಲಿ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿದ್ದು, ಅಕ್ಟೋಬರ್ 16ರಂದು ಸಿನಿಮಾ ತೆರೆಕಾಣಲಿದೆ.