ಕಠ್ಮಂಡು, ಅ.20 (DaijiworldNews/TA): ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಸಾರಾ ಅಲಿ ಖಾನ್ ಅಭಿನಯದ ಬಹುನಿರೀಕ್ಷಿತ ಹಿಂದಿ ಸಿನಿಮಾ ‘ಉಡ್ತಾ ತೀರ್’ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ. ಅಕ್ಟೋಬರ್ 23ರಂದು ತೆರೆಗೆ ಬರಲು ಸಿದ್ಧವಾಗಿರುವ ಈ ಚಿತ್ರಕ್ಕೆ ನೆರೆಯ ನೇಪಾಳದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿದೆ. ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ನೇಪಾಳದಲ್ಲಿ ನಿಷೇಧಿಸಲು ಕಾರಣವೇನು ಎಂಬ ಕುತೂಹಲ ಮೂಡಿದೆ. ಆಸ್ಕರ್ ವಿಜೇತ ನಿರ್ಮಾಪಕಿ ಗುನೀತ್ ಮೊಂಗ ನಿರ್ಮಿಸಿರುವ ಈ ಸಿನಿಮಾ, ಟ್ರೈಲರ್ ಬಿಡುಗಡೆಯಾದ ಬಳಿಕವೇ ಗಮನ ಸೆಳೆದಿತ್ತು. ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಕ್ಕೆ ನೇಪಾಳದ ಸೆಂಟ್ರಲ್ ಫಿಲ್ಮ್ ಸೆನ್ಸಾರ್ ಬೋರ್ಡ್ ಅನುಮತಿ ನೀಡದಿರುವುದು ಈಗ ಚರ್ಚೆಗೆ ಕಾರಣವಾಗಿದೆ.

ಸಿನಿಮಾ ನಿಷೇಧಕ್ಕೆ ಕಾರಣವೇನು? : ನೇಪಾಳದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಅಧಿಕೃತ ಪತ್ರದ ಪ್ರಕಾರ, ರಾಷ್ಟ್ರೀಯ ಸಿನಿಮಾ ಕಾಯ್ದೆ 2026ರ ಸೆಕ್ಷನ್ 8(3)ರ ಅಡಿಯಲ್ಲಿ ಈ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಚಿತ್ರವನ್ನು ಪರಿಶೀಲಿಸಿದ ಸೆನ್ಸಾರ್ ಮಂಡಳಿಯು ಅದರ ವಿಷಯವು ಕಾನೂನಿನಡಿ ನಿರ್ಬಂಧಿತ ವರ್ಗಕ್ಕೆ ಸೇರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ, ಚಿತ್ರಕ್ಕೆ ಸಾರ್ವಜನಿಕ ಪ್ರದರ್ಶನದ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.
‘ಉಡ್ತಾ ತೀರ್’ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಅವರು ಪಾಕಿಸ್ತಾನದಿಂದ ಭಾರತಕ್ಕೆ ಬರುವ ಗೂಢಚಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತಕ್ಕೆ ಬಂದ ಬಳಿಕ ಅಪಘಾತವೊಂದರಲ್ಲಿ ಸಿಲುಕಿ ನೆನಪಿನ ಶಕ್ತಿ ಕಳೆದುಕೊಳ್ಳುವ ನಾಯಕನಿಗೆ ತಾನು ಭಾರತದಲ್ಲಿದ್ದೇನೆಯೇ ಅಥವಾ ಪಾಕಿಸ್ತಾನದಲ್ಲಿದ್ದೇನೆಯೇ ಎಂಬುದೂ ಮರೆತುಹೋಗುತ್ತದೆ. ಈ ಸನ್ನಿವೇಶಗಳ ಸುತ್ತ ಸಿನಿಮಾ ಹಾಸ್ಯಮಯವಾಗಿ ಸಾಗುತ್ತದೆ. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಒಳಗೊಂಡಿರುವ ಚಿತ್ರದ ಕಥಾವಸ್ತುವು ನೇಪಾಳದ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದೇ ವೇಳೆ, ನೇಪಾಳದಲ್ಲಿ ಈ ಹಿಂದೆ ‘ಧುರಂಧರ್’ ಮತ್ತು ‘ಧುರಂಧರ್ 2’ ಚಿತ್ರಗಳು ಬಿಡುಗಡೆಯಾಗಿದ್ದವು ಎಂಬ ಅಂಶವೂ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ, ‘ಉಡ್ತಾ ತೀರ್’ ಚಿತ್ರಕ್ಕೆ ಮಾತ್ರ ಅನುಮತಿ ನಿರಾಕರಿಸಿರುವುದರ ಕುರಿತು ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ, ಅಕ್ಟೋಬರ್ 23ರಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಆಯುಷ್ಮಾನ್ ಖುರಾನಾ ಮತ್ತು ಸಾರಾ ಅಲಿ ಖಾನ್ ಅಭಿನಯದ ‘ಉಡ್ತಾ ತೀರ್’ ಸಿನಿಮಾ ನೇಪಾಳದಲ್ಲಿ ತೆರೆಕಾಣಲಿದೆಯೇ ಎಂಬುದು ಸದ್ಯಕ್ಕೆ ಕುತೂಹಲದ ವಿಷಯವಾಗಿದೆ.