ಹೈದರಾಬಾದ್, ಅ.26 (DaijiworldNews/AA): ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಹಿಂದಿಯ ಸಂದರ್ಶನವೊಂದು ಪ್ರಸಾರವಾದ ಬೆನ್ನಲ್ಲೇ ಇವರಿಬ್ಬರ ಮದುವೆ ಪ್ರಪೋಸಲ್ ವಿಚಾರವಾಗಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಇದೀಗ ಈ ಎಲ್ಲಾ ಟೀಕೆಗಳಿಗೆ ನಟಿ ರಶ್ಮಿಕಾ ಮಂದಣ್ಣ ತಿರುಗೇಟು ನೀಡಿದ್ದಾರೆ.

ಈ ಟೀಕೆಗಳ ವಿಚಾರವಾಗಿ ತಮ್ಮ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಪೋಸ್ಟ್ ಮಾಡಿರುವ ನಟಿ, "ಸಂದರ್ಶನದ ಬಳಿಕ ನೆಟ್ಟಿಗರು ಆಡಿಕೊಳ್ಳುತ್ತಿರುವ ರೀತಿ ಕೇವಲ ವೈಯಕ್ತಿಕ ಅಭಿಪ್ರಾಯದಂತೆ ಕಾಣುತ್ತಿಲ್ಲ, ಬದಲಾಗಿ ತಮ್ಮ ಸಿಟ್ಟನ್ನು ತೀರಿಸಿಕೊಳ್ಳಲು ಕಾಯುತ್ತಿರುವ ಒಂದು ಉದ್ರಿಕ್ತ ಗುಂಪಿನಂತೆ ಆಡುತ್ತಿದ್ದಾರೆ. ತಮ್ಮಿಬ್ಬರ ಮದುವೆ ವಿಚಾರದ ಮೂಲ ಉದ್ದೇಶವನ್ನೇ ಜನ ಮರೆತು ಬಿಟ್ಟಿದ್ದಾರೆ" ಎಂದು ತಮ್ಮ ಪತಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.
"ನನಗೆ ಜೀವನದಲ್ಲಿ ಏನು ಬೇಕು ಎಂಬುದು ಕ್ಲಿಯರ್ ಆಗಿ ಗೊತ್ತಿತ್ತು. ಹಾಗೆಯೇ ನನ್ನ ಸಂಗಾತಿಗೆ ಲೈಫ್ನ ಪ್ರಾಕ್ಟಿಕಲ್ ವಿಷಯಗಳ ಬಗ್ಗೆ ಯೋಚಿಸಲು ಕೊಂಚ ಸಮಯ ಬೇಕಿತ್ತು. ಅದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ದೃಷ್ಟಿಯಲ್ಲಿ ಮದುವೆ ಅಂದರೆ ಬರೀ ಮಂಡಿಯೂರಿ ಕುಳಿತು ಉಂಗುರ ತೊಡಿಸುವ ಅಲಂಕಾರಿಕ ಭಾಗವಲ್ಲ; ಇಬ್ಬರೂ ಒಟ್ಟಾಗಿ ಒಂದು ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳುವುದು" ಎಂದು ಹೇಳಿದ್ದಾರೆ.
"ಹೌದು, ನನಗೆ ನನ್ನ ಗಂಡನ ಮೇಲೆ ಅತಿಯಾದ ಪ್ರೀತಿ ಇದೆ, ಅದರಲ್ಲಿ ತಪ್ಪೇನಿದೆ? ಅವರು ನನ್ನ ಇಡೀ ಜೀವನದ ಸಂಗಾತಿ, ಬೆಸ್ಟ್ ಫ್ರೆಂಡ್, ನನ್ನ ಮಕ್ಕಳಿಗೆ ತಂದೆ ಮತ್ತು ಕೊನೆಗಾಲದವರೆಗೂ ಜೊತೆಗಿರುವ ವ್ಯಕ್ತಿ. ಮದುವೆಯಾದ ಮೇಲೂ 'ನಾವು ಮದುವೆಯಾಗೋಣವೇ?' ಎಂದು ಕೇಳುವಷ್ಟು ಪ್ರೀತಿ ಇರಬೇಕು. ಇದಕ್ಕಾಗಿ ನಾನು ನೂರಲ್ಲ, ಸಾವಿರ ಬಾರಿ ಪ್ರಪೋಸ್ ಮಾಡಲೂ ರೆಡಿ ಇದ್ದೇನೆ" ಎಂದು ಪೋಸ್ಟ್ ಮಾಡಿದ್ದಾರೆ.
"ನನ್ನ ಲೈಫ್ ತುಂಬಾ ಕಷ್ಟದಲ್ಲಿದ್ದಾಗ ಇವರ್ಯಾರೂ ನನ್ನ ಜೊತೆ ಇರಲಿಲ್ಲ, ಆದರೆ, ನನ್ನ ಸಂಗಾತಿ ಆಗಲೂ ಇದ್ದರು, ಈಗಲೂ ಇದ್ದಾರೆ ನನ್ನ ಮೂಳೆ ಮುರಿದಾಗ, ಪ್ರತಿ ತಿಂಗಳು ಹೊಟ್ಟೆನೋವಿನಿಂದ ನರಳುವಾಗ, ನಡುರಾತ್ರಿ ಆತಂಕದಿಂದ ಎಚ್ಚರವಾದಾಗ ಇವರ್ಯಾರೂ ಇರಲ್ಲ, ಅವನು ಮಾತ್ರ ಇರುತ್ತಾನೆ. ಈಗ ನಾನಂತೂ ತುಂಬಾ ಹ್ಯಾಪಿಯಾಗಿದ್ದೇನೆ" ಎಂದು ತಿಳಿಸಿದ್ದಾರೆ.
"ಕೊನೆಯದಾಗಿ ತಮ್ಮ ಬಗ್ಗೆ ಹಬ್ಬುತ್ತಿರುವ ಸುಳ್ಳು ಎಡಿಟ್ಗಳು ಮತ್ತು ಕಲ್ಪಿತ ಕಥೆಗಳನ್ನು ನಂಬಬೇಡಿ. ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸ್ತ್ರೀವಾದ ಅಲ್ಲ, ಅದು ಫೆಮಿನಿಸಂ ಮುಖವಾಡ ಧರಿಸಿದ ಕಿರುಕುಳ" ಎಂದು ಕಿಡಿಕಾರಿದ್ದಾರೆ.
"ಜೊತೆಗೆ 10 ವರ್ಷಗಳ ನಂತರವೂ ತಮ್ಮನ್ನು ನೆನಪಿಟ್ಟುಕೊಂಡು ಪ್ರೀತಿಸುತ್ತಿರುವ ಕನ್ನಡಿಗರಿಗೆ ಥ್ಯಾಂಕ್ಸ್. ನಾವಿಬ್ಬರೂ ಮೆಚೂರ್ಡ್ ವ್ಯಕ್ತಿಗಳು, ನಮ್ಮಿಬ್ಬರಿಗೂ ಹೇಗೆ ಬದುಕಬೇಕು ಎಂಬ ಸ್ವಾತಂತ್ರ್ಯವಿದೆ, ನಾವಿಬ್ಬರೂ ಒಬ್ಬರನ್ನೊಬ್ಬರು ಕೊನೆಯವರೆಗೂ ಆಯ್ಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ" ಎಂದಿದ್ದಾರೆ