ಚೆನ್ನೈ,ಅ.27 (DaijiworldNews/AK): ಬಾಲಿವುಡ್ನ ನಟಿ ರಾಧಿಕಾ ಆಪ್ಟೆ ಅವರು ಸೌತ್ ಸಿನಿಮಾ ಇಂಡಸ್ಟ್ರಿ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಉತ್ತರ ಭಾರತದ ನಟಿಯರಿಗೆ ಮಣೆ ಹಾಕುವುದರ ಹಿಂದೆ ಮೈಬಣ್ಣದ ಗೀಳು ಇದೆ ಎಂದು ಅವರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಿರ್ದಿಷ್ಟ ಕಾರಣಕ್ಕಾಗಿಯೇ ತಾನು ದಕ್ಷಿಣದ ಸಿನಿಮಾಗಳಿಂದ ದೂರ ಉಳಿದೆ ಎಂದು ಸಂದರ್ಶನವೊಂದರಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಇದೀಗ ಈ ಹೇಳಿಕೆ ಚರ್ಚೆ ಹುಟ್ಟುಹಾಕಿದೆ.
ದಕ್ಷಿಣದ ನಿರ್ಮಾಪಕರು ಮತ್ತು ನಿರ್ದೇಶಕರು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂದು ರಾಧಿಕಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲಿನ ನಟಿಯರು ಅದ್ಭುತ ಪ್ರತಿಭೆ ಹೊಂದಿದ್ದು, ಭಾಷೆಯ ಮೇಲೂ ಉತ್ತಮ ಹಿಡಿತ ಹೊಂದಿರುತ್ತಾರೆ. ಆದರೆ ಮುಂಬೈನಿಂದ ಹೋಗಿ, ಭಾಷೆಯೇ ಬಾರದ ನಟಿಯರನ್ನು ಕರೆಸಿ ಡಬ್ಬಿಂಗ್ ಮಾಡಿಸುವುದನ್ನು ತಾನು ಬೆಂಬಲಿಸುವುದಿಲ್ಲ ಎಂದು ಅವರು ಖಡಾಖಂಡಿತವಾಗಿ ನುಡಿದಿದ್ದಾರೆ.
ಹಿಂದೆ ತೆಲುಗು ಚಿತ್ರರಂಗದ ಪುರುಷ ಪ್ರಧಾನ ಧೋರಣೆ ಹಾಗೂ ಮಹಿಳಾ ಪಾತ್ರಗಳ ಬಿಂಬನೆಯನ್ನು ರಾಧಿಕಾ ಕಟುವಾಗಿ ಟೀಕಿಸಿದ್ದರು. ಆದರೆ ಈಗ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ, ಅಂದಿನ ಸೌತ್ ಚಿತ್ರರಂಗದ ಕೆಲವು ಒಳ್ಳೆಯ ಗುಣಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲಿನ ಸೆಟ್ಗಳಲ್ಲಿ ಎಲ್ಲರೂ ಬಹಳ ಸ್ನೇಹಪರವಾಗಿ, ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಅವರು ಹಂಚಿಕೊಂಡಿದ್ದಾರೆ.
ಸುಮಾರು ಹತ್ತು ವರ್ಷಗಳ ಬಳಿಕವೂ ದಕ್ಷಿಣದ ಸಿನಿಮಾಗಳ ಬಗ್ಗೆ ರಾಧಿಕಾ ಆಪ್ಟೆ ನೀಡಿರುವ ಈ ಹೇಳಿಕೆಗಳು ಈಗ ಸಿನಿಮಾರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕು ಎಂಬ ಅವರ ಕಾಳಜಿಗೆ ಹಲವರ ಬೆಂಬಲವೂ ವ್ಯಕ್ತವಾಗುತ್ತಿದೆ.